ಕೊರೊನಾ ಮೂರನೇ ಅಲೆ ತಡೆಗೆ ಕಠಿಣ ಕ್ರಮ : ಆರ್.ಅಶೋಕ್.

62
firstsuddi

ಬೆಂಗಳೂರು : ಕೊರೊನಾ ಮೂರನೇ ಅಲೆ ಬಾರದಂತೆ ಕಠಿಣ ಕ್ರಮ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2ನೇ ಅಲೆಯಿಂದ ನಾವು ಪಾಠ ಕಲಿತಿದ್ದೇವೆ. ಆ ವೇಳೆಯಲ್ಲಿ ಸಾಕಷ್ಟು ಸಾವು- ನೋವು ಸಂಭವಿಸಿವೆ. ಕೊರೊನಾ ಮೂರನೇ ಅಲೆ ಬಾರದಂತೆ ತಡೆಯುವುದು ನಮ್ಮ ಮೊದಲ ಆದ್ಯತೆ ಆಗಿದೆ. ತಜ್ಞರ ವರದಿ ಆಧರಿಸಿ ಸರ್ಕಾರ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಜನರನ್ನು ರಕ್ಷಣೆ ಮಾಡುವ ಕೆಲಸ ಸರ್ಕಾರ ಮಾಡಲಿದೆ. ಸೂಕ್ತ ಮುಂಜಾಗೃತ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸಿಎಂ ಜೊತೆ ಸಭೆ ನಂತರ ನಿರ್ಧಾರ ಮಾಡುತ್ತೇವೆ. ಕೊರೊನಾ ತಡೆಗೆ ಮುಂಜಾಗ್ರತಾ ಕ್ರಮವಾಗಿ ಬೆಡ್, ಆಕ್ಸಿಜನ್ ಸೇರಿದಂತೆ ಸಕಲ ಸಿದ್ಧತೆಗಳನ್ನು ಮಾಡಲು ಎಲ್ಲಾ ಡಿಸಿಗಳಿಗೂ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

ಹೆಲಿಕಾಪ್ಟರ್ ದುರಂತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಸಚಿವ ಅಶೋಕ್, ಬಿಪಿನ್ ರಾವತ್ ಅವರು ದೇಶ ಸೇವೆಗೆ ತಮ್ಮ ಜೀವನ ಮುಡುಪಿಟ್ಟಿದ್ದರು. ಪಾಕಿಸ್ತಾನದ ವಿರುದ್ಧ ಹೋರಾಡಿದ್ದರು. ಅವರ ಅಗಲಿಕೆ ನಮಗೆ ನೋವು ತಂದಿದೆ. ರಾವತ್ ಸಾವಿನ ಬಗ್ಗೆ ಪಾಕಿಸ್ತಾನದಲ್ಲಿ ಬಹಳ ವ್ಯಂಗ್ಯ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಂಭ್ರಮಿಸುವುದು ಹೀನ ಮನಸ್ಥಿತಿಯನ್ನು ತೋರಿಸುತ್ತದೆ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದರು.