ಬೆಳಗಾವಿ/ಶಿವಮೊಗ್ಗ : ರಾಜ್ಯದಲ್ಲಿ ಕೊರೊನಾ ವೈರಸ್ ಹಾಗೂ ಹಕ್ಕಿಜ್ವರ ಭೀತಿ ಹಿನ್ನೆಲೆ, ಬೆಳಗಾವಿ ಹಾಗೂ ಶಿವಮೊಗ್ಗದಲ್ಲಿ ಕೋಳಿಗಳನ್ನು ಜೀವಂತ ಸಮಾಧಿ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಲೋಶಸುರ ಗ್ರಾಮದ ನಿವಾಸಿ ನಜೀರ್ ಮಕಾಂದರ್ ಎಂಬುವವರು ಕೋಳಿ ಫಾರಂ ಮಾಡಿಕೊಂಡಿದ್ದರು. ಅವರು ಕೋಳಿ ಫಾರಂನಲ್ಲಿ ಸುಮಾರು 6ಸಾವಿರ ಕೋಳಿಗಳನ್ನು ಸಾಕಿದ್ದರು. ಆದರೆ ರಾಜ್ಯದಲ್ಲಿ ಕೊರೊನಾ ವೈರಸ್ ಹಾಗೂ ಹಕ್ಕಿಜ್ವರ ವ್ಯಾಪಕವಾಗಿ ಹರಡಿ ಕೋಳಿಗಳ ಬೆಲೆಯಲ್ಲೂ ಕುಸಿತ ಕಂಡಿದ್ದು, ಹೀಗಾಗಿ ಮಕಾಂದರ್ ಅವರು ತಮ್ಮ ಜಮೀನಿನಲ್ಲಿ ಜೆಸಿಬಿಯಿಂದ ಗುಂಡಿ ತೋಡಿಸಿ ತಾವು ಸಾಕಿದ್ದ 6ಸಾವಿರ ಕೋಳಿಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ.
ಇತ್ತ ಶಿವಮೊಗ್ಗದಲ್ಲೂ ಕೂಡಾ ಕೋಳಿಗಳ ಬೆಲೆ ಕುಸಿತದಿಂದ ಬೇಸತ್ತು ಶ್ರೀನಿವಾಸ್ ಎಂಬುವವರು ತಮ್ಮ ಕೋಳಿ ಫಾರಂನಲ್ಲಿದ್ದ 4ಸಾವಿರ ಕೋಳಿಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಯಿಸಿದ ಶ್ರೀನಿವಾಸ್ ಅವರು, ಕೊರೊನಾ ವೈರಸ್ ಹಾಗೂ ಹಕ್ಕಿಜ್ವರ ಭೀತಿ ಹೆಚ್ಚಾಗುತ್ತಿರುವುದರಿಂದ ಕೋಳಿಗಳ ಬೆಲೆ 8ರೂಗೆ ಕುಸಿತ ಕಂಡಿದೆ. 22ದಿನದ ಕೋಳಿ ಮರಿಗಳು ಇನ್ನು 24 ದಿನಗಳಲ್ಲಿ 2ರಿಂದ 3ಕೆಜಿ ತೂಕಕ್ಕೆ ಬರುತ್ತವೆ. ಈ ಕೋಳಿಗಳು ಮಾರುಕಟ್ಟೆಗೆ ಬರುವಾಗ ಇದೇ ಬೆಲೆ ಇದ್ದರೆ ಭಾರಿ ನಷ್ಠ ಅನುಭವಿಸಬೇಕಾಗುತ್ತದೆ. ಹೀಗಾಗಿ ಕೋಳಿಗಳನ್ನು ಗುಂಡಿ ತೋಡಿ ಮುಚ್ಚುತ್ತಿದ್ದೇವೆ ಎಂದು ತಿಳಿಸಿದ್ದಾರೆ.










