ನವದೆಹಲಿ : ಡಿಸೆಂಬರ್ 12, 2018 ರಂದು ನಡೆದ ಕೊಲಿಜಿಯಂ ಸಭೆಯ ವಿವರಗಳನ್ನು ಆರ್ ಟಿಐ ಕಾಯ್ದೆಯಡಿ ಬಹಿರಂಗಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ನೇತೃತ್ವದ ನ್ಯಾಯಪೀಠ, ಕೊಲಿಜಿಯಂ ಬಹು-ಸದಸ್ಯ ಸಂಸ್ಥೆಯಾಗಿದ್ದು, ಅದರ ತಾತ್ಕಾಲಿಕ ನಿರ್ಧಾರವನ್ನು ಸಾರ್ವಜನಿಕ ವೇದಿಕೆಯಲ್ಲಿ ತರಲು ಸಾಧ್ಯವಿಲ್ಲ. ಎಲ್ಲಾ ಕೊಲಿಜಿಯಂ ಸದಸ್ಯರು ತೆಗೆದುಕೊಂಡ ಮತ್ತು ಸಹಿ ಮಾಡಿದ ನಿರ್ಣಯಗಳನ್ನು ಮಾತ್ರ ಅಂತಿಮ ನಿರ್ಧಾರ ಎಂದು ಹೇಳಬಹುದು. ಸದಸ್ಯರ ನಡುವೆ ಚರ್ಚೆ ಮತ್ತು ಸಮಾಲೋಚನೆಯ ಮೇಲೆ ತೆಗೆದುಕೊಂಡ ತಾತ್ಕಾಲಿಕ ನಿರ್ಣಯಗಳು ಅವರೆಲ್ಲರೂ ಸಹಿ ಮಾಡದ ಹೊರತು ಅಂತಿಮವೆಂದು ಹೇಳಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
2019 ರ ಜನವರಿ 10ರಂದು ಅಂಗೀಕರಿಸಿದ ನಿರ್ಣಯದಲ್ಲಿ, ನ್ಯಾಯಮೂರ್ತಿ ಎಂ.ಬಿ.ಲೋಕೂರ್ ಅವರ ನಿವೃತ್ತಿಯಿಂದಾಗಿ ಸಂಯೋಜನೆಯನ್ನು ಬದಲಾಯಿಸಿದ ಕೊಲಿಜಿಯಂ, ಡಿಸೆಂಬರ್ 12, 2018 ರಂದು ತನ್ನ ಸಭೆಯಲ್ಲಿ ಕೆಲವು ಹೆಸರುಗಳ ಬಗ್ಗೆ ಸಮಾಲೋಚನೆಗಳನ್ನು ನಡೆಸಿತ್ತು. ಆದರೆ ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ ಎಂದು ಉಲ್ಲೇಖಿಸಿದೆ.
2018 ರ ಡಿಸೆಂಬರ್ 12 ರಂದು ನಡೆದ ಸುಪ್ರೀಂ ಕೋರ್ಟ್ ಕೊಲಿಜಿಯಂ ಸಭೆಯ ಕಾರ್ಯಸೂಚಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಆರ್ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಸಲ್ಲಿಸಿದ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.










