ಕೊಳೆತ ಸ್ಥಿತಿಯಲ್ಲಿ ಸೋದರಿಯರಿಬ್ಬರ ಶವ ಪತ್ತೆ ; ಕೊಲೆ ಶಂಕೆ…

85
firstsuddi

ದಾವಣಗೆರೆ : ಕೊಳೆತ ಸ್ಥಿತಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಹೊರವಲಯದಲ್ಲಿರುವ ಆಂಜನೇಯ ಕಾಟನ್ ಮಿಲ್ ಪ್ರದೇಶದಲ್ಲಿ ಗೌರಮ್ಮ (34) ಮತ್ತು ರಾಧಮ್ಮ (32) ಎಂಬುವವರ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಮೃತ ಸಹೋದರಿಯರಿಬ್ಬರು ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಬೆನಕನಹಳ್ಳಿಯವರು ಎಂದು ತಿಳಿದುಬಂದಿದ್ದು, ಕೆಲ ತಿಂಗಳ ಹಿಂದಷ್ಟೇ ಆಂಜನೇಯ ಕಾಟನ್ ಮಿಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಈ ಇಬ್ಬರು ಆಂಜನೇಯ ಕಾಟನ್ ಮಿಲ್ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಮನೆಯಿಂದ ಕೆಟ್ಟ ವಾಸನೆ ಬಂದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬಾಗಿಲು ತೆರೆದು ಪರಿಶೀಲನೆ ನಡೆಸಿದಾಗ ಅಕ್ಕ-ತಂಗಿಯರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ನಡೆದು ಮೂರ್ನಾಲ್ಕು ದಿನಗಳು ಕಳೆದಿರಬಹುದು ಎಂದು ಅಂದಾಜಿಸಲಾಗಿದೆ.

ಘಟನೆ ಬಗ್ಗೆ ಮೃತ ಸಹೋದರಿಯರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.