ಕೋಲಾರದಿಂದಲೇ ಸ್ಪರ್ಧಿಸುತ್ತೇನೆ ; ಸಿದ್ದರಾಮಯ್ಯ ಘೋಷಣೆ…

50
firstsuddi

ಕೋಲಾರ : ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಇಂದು ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಿಮ್ಮ ಪ್ರೀತಿ, ಅಭಿಮಾನವನ್ನು ತಿರಸ್ಕಾರ ಮಾಡಲು ಸಾಧ್ಯವಿಲ್ಲ. ನಾನು ಕೋಲಾರದಿಂದ ಸ್ಪರ್ಧಿಸಲು ತೀರ್ಮಾನ ಮಾಡಿದ್ದು, ಹೈಕಮಾಂಡ್ ಸೂಚಿಸಿದರೆ ಕೋಲಾರದಿಂದ ಸ್ಪರ್ಧಿಸಲು ಸಿದ್ಧ. ನನ್ನ ಸ್ಪರ್ಧೆಗೆ ಹೈಕಮಾಂಡ್ ತೀರ್ಮಾನ ಕೂಡ ಬೇಕಾಗುತ್ತದೆ ಎಂದರು.

ಜನರ ಆಶೀರ್ವಾದ ಇದ್ದರೆ ಮಾತ್ರ ರಾಜಕೀಯ ಮಾಡಲು ಸಾಧ್ಯ. ಚಾಮುಂಡೇಶ್ವರಿ ಕ್ಷೇತ್ರದಿಂದ 5 ಬಾರಿ, ವರುಣಾದಿಂದ 2 ಬಾರಿ ಸ್ಪರ್ಧಿಸಿದ್ದೇನೆ. ಸಿದ್ದರಾಮಯ್ಯಗೆ ಕ್ಷೇತ್ರ ಇಲ್ಲ ಅಂತಾ ಅಪಪ್ರಚಾರ ಮಾಡ್ತಿದ್ದಾರೆ. ವರುಣಾದಿಂದಲೂ ಸ್ಪರ್ಧಿಸಿ ಎಂದು ಜನರು ಒತ್ತಾಯ ಮಾಡ್ತಿದ್ದಾರೆ. ಬಾದಾಮಿ ಕ್ಷೇತ್ರ ಜನರು ಹೆಲಿಕಾಪ್ಟರ್ ಕೊಡಿಸುತ್ತೇವೆ ಅಂತಿದ್ದಾರೆ. ನಾನು ಈಗಲೂ ಬಾದಾಮಿ ಕ್ಷೇತ್ರದ ಶಾಸಕ. ಕೋಲಾರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾದ ಶ್ರೀನಿವಾಸಗೌಡ ಕೂಡ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಮುನಿಯಪ್ಪ, ರಮೇಶ್ ಕುಮಾರ್ ಕೂಡ ನನಗೆ ಆಹ್ವಾನ ನೀಡಿದ್ದಾರೆ ಎಂದು ಹೇಳಿದರು.

ಯಾವುದೇ ತಪ್ಪು ಸಂದೇಶ ಹೋಗಬಾರದು. ನನ್ನ ಬಗ್ಗೆ ಕೆಲವರು ಅಪಪ್ರಚಾರ ಮಾಡಲು ಮುಂದಾಗುತ್ತಾರೆ. ಹೊರಗಡೆಯವರು ಜನರ ಕಷ್ಟ ಸುಖ ಕೇಳಲು ಆಗಲ್ಲ ಅಂತಾರೆ. ನಾನು ಪ್ರತಿ ವಾರ ಕೂಡ ಕೋಲಾರಕ್ಕೆ ಬರುತ್ತೇನೆ. ನೇರವಾಗಿ ಯಾರು ಬೇಕಾದರೂ ನನ್ನನ್ನು ಭೇಟಿ ಮಾಡಬಹುದು. ಚಡ್ಡಿ ಹಾಕಿದವನೂ ಕೂಡ ಬಂದು ನನ್ನನ್ನು ಭೇಟಿ ಮಾಡಬಹುದು ಎಂದು ಸಿದ್ದರಾಮಯ್ಯ ಟಾಂಗ್ ನೀಡಿದರು.