ಮೈಸೂರು: ವ್ಯಕ್ತಿಯೊಬ್ಬ ತನ್ನ ತಂಗಿ ಅನ್ಯಧರ್ಮೀಯ ಯುವಕನನ್ನು ಲವ್ ಮಾಡುತ್ತಿದ್ದಳೆಂಬ ಕ್ಷುಲ್ಲಕ ಕಾರಣಕ್ಕೆ ಆಕೆಯೊಂದಿಗೆ ತನ್ನ ತಾಯಿಯನ್ನೂ ಕೆರೆಗೆ ತಳ್ಳಿ ಕೊಲೆಗೈದಿರುವ ಘಟನೆ ಜಿಲ್ಲೆಯ ಹುಣಸೂರು ತಾಲ್ಲೂಕಿನ ಮರೂರು ಗ್ರಾಮದಲ್ಲಿ ನಡೆದಿದೆ.
ಹಿರಿಕ್ಯಾತನಹಳ್ಳಿಯ ಅನಿತಾ(40) ಹಾಗೂ ಮಗಳು ಧನುಶ್ರೀ(19) ಮೃತರು. ಆರೋಪಿಯನ್ನು ನಿತಿನ್ ಎಂದು ಗುರುತಿಸಲಾಗಿದೆ. ಹನಗೋಡು ಗ್ರಾಮದ ಬೇರೆ ಯುವಕನನ್ನ ಧನುಶ್ರೀ ಪ್ರೀತಿಸುತ್ತಿದ್ದಳು. ಈ ವಿಚಾರದಲ್ಲಿ ಅಣ್ಣ, ತಂಗಿಯರ ನಡುವೆ ವೈಮನಸ್ಸು ಬೆಳೆದಿತ್ತು. ಆಗಾಗ ಇಬ್ಬರ ನಡುವೆ ಕೂಡ ಗಲಾಟೆ ನಡೆಯುತ್ತಿತ್ತು. ಹೆತ್ತವರು ಇಬ್ಬರನ್ನೂ ಸಮಾಧಾನ ಮಾಡುತ್ತಿದ್ದರು. ನಿನ್ನೆ ಸಂಜೆ ಹೆಮ್ಮಿಗೆ ಗ್ರಾಮದಲ್ಲಿರುವ ಮಾವನ ಮನೆಗೆ ಹೋಗುವ ಕಾರಣ ನೀಡಿ ತಾಯಿ ಹಾಗೂ ತಂಗಿಯನ್ನು ನಿತಿನ್ ಬೈಕ್ನಲ್ಲಿ ಕರೆದೊಯ್ದಿದ್ದಾನೆ. ಮರೂರು ಕೆರೆ ಬಳಿ ಬೈಕ್ ನಿಲ್ಲಿಸಿ ತಂಗಿಯನ್ನು ಮೊದಲು ಕೆರೆಗೆ ತಳ್ಳಿದ್ದಾನೆ. ನಂತರ ಮಗಳನ್ನು ರಕ್ಷಿಸಲು ಬಂದ ತಾಯಿಯನ್ನೂ ಸಹ ಕೆರೆಗೆ ತಳ್ಳಿದ್ದಾನೆ.
ನಂತರ ಪಶ್ಚಾತ್ತಾಪ ಪಟ್ಟು ತಾಯಿಯನ್ನು ರಕ್ಷಿಸಲು ನಿತಿನ್ ಕೆರೆಗೆ ಹಾರಿದ್ದಾನೆ. ಆದ್ರೆ, ಅಷ್ಟರಲ್ಲಾಗಲೇ ಇಬ್ಬರೂ ಕೊನೆಯುಸಿರೆಳೆದಿದ್ದರು. ಒದ್ದೆ ಬಟ್ಟೆಯಲ್ಲೇ ಮನೆಗೆ ಹಿಂದಿರುಗಿ ತಂದೆ ಸತೀಶ್ ಬಳಿ ನಡೆದ ಘಟನೆ ಬಗ್ಗೆ ನಿತಿನ್ ತಿಳಿಸಿದ್ದಾನೆ.
ಆರೋಪಿ ನಿತಿನ್ನನ್ನು ಹುಣಸೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನ ಹೊರತೆಗೆದಿದ್ದಾರೆ. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










