ಗಾಂಧೀಜಿ ಹತ್ಯೆಗೆ ಸಂಚು ರೂಪಿಸಿದ್ದ ಸಾವರ್ಕರ್ ಗೆ ಬಿಜೆಪಿ ಭಾರತ ರತ್ನ ನೀಡಲು ಮುಂದಾಗುತ್ತಿದೆ : ಸಿದ್ದರಾಮಯ್ಯ

202
firstsuddi

ಮಂಗಳೂರು : ಗಾಂಧೀಜಿ ಹತ್ಯೆಗೆ ಸಂಚು ರೂಪಿಸಿದ್ದ ಸಾವರ್ಕರ್ ಗೆ ಬಿಜೆಪಿ ಭಾರತ ರತ್ನ ನೀಡಲು ಮುಂದಾಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಾವರ್ಕರ್ ಅವರು ಗೋಡ್ಸೆಯ ಹಿಂದೆ ನಿಂತು ಗಾಂಧೀಜಿ ಹತ್ಯೆಗೆ ಸಂಚು ರೂಪಿಸಿದ್ದರು. ಆದರೆ ಸೂಕ್ತ ಸಾಕ್ಷಿಗಳಿಲ್ಲದೆ ಆರೋಪಿಯಾಗಿ ಗುರುತಿಸಿರಲಿಲ್ಲ ಅಷ್ಟೇ. ಆದರೆ ಅಂತಹ ವ್ಯಕ್ತಿಗೆ ಬಿಜೆಪಿ ಭಾರತ ರತ್ನ ಕೊಡಲು ಮುಂದಾಗಿದೆ. ಹಾಗಾದರೆ ಗೋಡ್ಸೆಗೂ ಭಾರತ ರತ್ನವನ್ನು ನೀಡಲಿ ಎಂದು ವ್ಯಂಗ್ಯವಾಡಿದರು.
ರಾಜ್ಯ ಬಿಜೆಪಿ ಸರ್ಕಾರಕ್ಕೆ ಹೇಳುವವರು, ಕೇಳುವವರು ಯಾರೂ ಇಲ್ಲ. ಕೇವಲ ವರ್ಗಾವಣೆ ದಂಧೆ ನಡೆಸುವುದನ್ನು ಬಿಟ್ಟರೆ ಬೇರೆ ಯಾವುದೇ ಅಭಿವೃದ್ದಿ ಕಾರ್ಯಗಳು ಸಕಾರದಲ್ಲಿ ನಡೆಯುತ್ತಿಲ್ಲ. ರಾಜ್ಯ ಸರ್ಕಾರ ಡಿಸೆಂಬರ್ ವರೆಗೂ ಸರ್ಕಾರ ಉಳಿಯುವುದು ಹೆಚ್ಚು. ಆ ಬಳಿಕ ಚುನಾವಣೆ ಬರುವುದು ನಿಶ್ಚಿತ. ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಒಲ್ಲದ ಶಿಶು ಅಷ್ಟೇ. ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಇಷ್ಟ ಇರಲಿಲ್ಲ. ಅನಿವಾರ್ಯ ಕಾರಣದಿಂದಾಗಿ ಮುಖ್ಯಮಂತ್ರಿಗಳಾಗಿ ಮಾಡಿದೆ ಅಷ್ಟೇ. ಇದೇ ವೇಳೆ ರಾಜ್ಯದಲ್ಲಿ 32 ಜಿಲ್ಲೆಗಳಿವೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ನಳಿನ್ ಕುಮಾರ್ ಅವರಿಗೆ ರಾಜ್ಯದಲ್ಲಿ ಜಿಲ್ಲೆಗಳು ಎಷ್ಟಿವೆ ಎಂಬುವುದೇ ಗೊತ್ತಿಲ್ಲ. ಅವರಿಗೆ ಮಂಗಳೂರು ಮಾತ್ರ ಗೊತ್ತು. ಅವರ ಜ್ಞಾನ ಇರೋದು ಅಷ್ಟೇ. ಈ ಪುಣ್ಯಾತ್ಮ ರಾಜ್ಯದಲ್ಲಿ ಎಷ್ಟು ತಾಲ್ಲೂಕುಗಳಿವೆ ಎಂದು ಹೇಳಲಿ ನೋಡೋಣ ಎಂದು ಲೇವಡಿ ಮಾಡಿದರು.