ಗಾಯಗೊಂಡ ಆನೆಗೆ ಚಿಕಿತ್ಸೆ ಕೊಡಿಸುವಂತೆ ರಾಹುಲ್ ಪತ್ರ – ಸ್ಪಂದಿಸಿದ ಸಿಎಂ.

47
firstsuddi

ಬೆಂಗಳೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಾಯಗೊಂಡಿರುವ ಆನೆ ಮತ್ತು ಅದರ ಮರಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸುವಂತೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪತ್ರ ಬರೆದಿದ್ದು, ಈ ಬಗ್ಗೆ ಸ್ಪಂದಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಗರಹೊಳೆ ಅರಣ್ಯಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲಿ ಇದನ್ನು ಗಮನಿಸಿದ್ದು, ಇನ್ನು ಅರ್ಧ ಗಂಟೆಯಲ್ಲಿ ಮಾಹಿತಿ ಪಡೆದು ಹಿರಿಯ ಅಧಿಕಾರಿಗಳ ಬಳಿ ಮಾತನಾಡಿ ಆನೆಗಳಿಗೆ ಏನೆಲ್ಲಾ ಚಿಕಿತ್ಸೆ ನೀಡಬಹುದು ಎಂದು ಪರಿಶೀಲನೆ ಮಾಡಲಾಗುವುದು. ಅವರು ಗಮನಕ್ಕೆ ತಂದಿರುವ ವಿಷಯದ ಬಗ್ಗೆ ಸ್ಪಂದಿಸಲಾಗುವುದು ಹಾಗೂ ಮಾನವೀಯ ದೃಷ್ಟಿಯಿಂದ ಅದರ ಅಗತ್ಯವೂ ಇದೆ ಎಂದರು.

ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ರಾಹುಲ್ ಗಾಂಧಿ ಅವರು ನಿನ್ನೆ ತಮ್ಮ ತಾಯಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರೊಂದಿಗೆ ನಾಗರಹೊಳೆ ಮೀಸಲು ಪ್ರದೇಶಕ್ಕೆ ಸಫಾರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಗಾಯಗೊಂಡ ಆನೆ ಮರಿಯೊಂದು ತನ್ನ ತಾಯಿ ಆನೆ ಜೊತೆ ಇರುವುದನ್ನು ಅವರು ನೋಡಿದ್ದಾರೆ.

ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ರಾಹುಲ್ ಗಾಂಧಿ, ನಾನು ಮತ್ತು ಕಾಂಗ್ರೆಸ್ ಅಧ್ಯಕ್ಷರು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಕೆಲಕಾಲ ಭೇಟಿ ನೀಡಿದ್ದೆವು. ಅಲ್ಲಿ ಗಾಯಗೊಂಡಿರುವ ಆನೆ ಮರಿಯೊಂದು ತನ್ನ ತಾಯಿಯೊಂದಿಗೆ ಇರುವ ಕರುಣಾಜನಕ ದೃಶ್ಯ ಕಂಡಿದ್ದೇವೆ. ಪುಟ್ಟ ಮರಿಯ ಬಾಲ ಮತ್ತು ಸೊಂಡಿಲು ಭಾಗದಲ್ಲಿ ತೀವ್ರತರದ ಗಾಯಗಳಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದೆ. ಆನೆ ಮರಿಯ ಜೀವ ಉಳಿಸಿ, ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಿ. ಗಾಯಗೊಂಡ ಆನೆ ಮರಿ ಹಾಗೂ ತಾಯಿ ಆನೆಗೂ ಚಿಕಿತ್ಸೆ ಕೊಡಿಸುವಂತೆ ರಾಹುಲ್ ಗಾಂಧಿ ಪತ್ರದಲ್ಲಿ ಮನವಿ ಮಾಡಿದ್ದರು.