ಗುಂಡಿನ ದಾಳಿ – ಪಾಕ್ ಪ್ರಧಾನಿ ಸೇರಿ ಮೂವರ ಮೇಲೆ ಅನುಮಾನ ವ್ಯಕ್ತಪಡಿಸಿದ ಇಮ್ರಾನ್ ಖಾನ್.

45
firstsuddi

ಇಸ್ಲಾಮಾಬಾದ್ : ಇಮ್ರಾನ್ ಖಾನ್ ಅವರು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸೇರಿದಂತೆ ಮೂವರು ತನ್ನ ಮೇಲೆ ದಾಳಿಯ ಸಂಚು ಮಾಡಿರುವುದಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಪಾಕ್ ಪ್ರಧಾನಿ ಶೆಹಬಾಜ್ ಷರೀಫ್, ಆಂತರಿಕ ಸಚಿವ ರಾಣಾ ಸನಾವುಲ್ಲಾ ಹಾಗೂ ಮೇಜರ್ ಜನರಲ್ ಫೈಸಲ್ ಅವರ ನಿರ್ದೇಶನದ ಮೇರೆಗೆ ತನ್ನ ಮೇಲೆ ಗುಂಡಿನ ದಾಳಿ ನಡೆದಿರುವುದಾಗಿ ಇಮ್ರಾನ್ ಖಾನ್ ಅವರು ಅನುಮಾನಗೊಂಡಿದ್ದಾರೆ ಎಂದು ಪಾಕಿಸ್ತಾನ ತೆಹ್ರಿಕ್-ಎ-ಇನ್ಸಾಫ್ (ಪಿಟಿಐ) ನಾಯಕ ಅಸದ್ ಉಮರ್ ಹಾಗೂ ಮಿಯಾನ್ ಅಸ್ಲಾಮ್ ಇಕ್ಬಾಲ್ ತಿಳಿಸಿದ್ದಾರೆ.

ಇಮ್ರಾನ್ ಖಾನ್ ಅವರ ಸ್ಥಿತಿ ಈಗ ಸ್ಥಿರವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಅಸಾದ್ ಉಮರ್ ಅವರು ಶಂಕಿತ ಮೂವರನ್ನು ಹುದ್ದೆಗಳಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಇಮ್ರಾನ್ ಖಾನ್ ಅಪಾಯದಲ್ಲಿದ್ದಾರೆ ಎಂದು ನಮಗೆ ವರದಿಗಳು ಬರುತ್ತಿರುವುದರಿಂದ ನಾನು ಇಮ್ರಾನ್ ಖಾನ್ ಅವರೊಂದಿಗೆ ಮಾತನಾಡಿದ್ದೇನೆ. ಆದಾಗ್ಯೂ, ನಾವು ಇದನ್ನು ಅಲ್ಲಾಹನಿಗೆ ಬಿಡಬೇಕು ಎಂದು ಅವರು ಹೇಳಿದರು. ಇಮ್ರಾನ್ ಖಾನ್ ಅವರ ಅನುಮತಿಗಾಗಿ ನಾವು ಕಾಯುತ್ತಿದ್ದೇವೆ. ಮೂವರನ್ನು ಹುದ್ದೆಯಿಂದ ತೆಗೆದುಹಾಕದಿದ್ದರೆ ದೇಶವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಬಂಧಿತ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ, ನಾನು ಇಮ್ರಾನ್ ಖಾನ್ ಅವರನ್ನು ಕೊಲ್ಲಲು ಬಂದಿದ್ದೆ. ಅವರು ಜನರ ದಾರಿ ತಪ್ಪಿಸುತ್ತಿದ್ದಾರೆ. ನನ್ನ ಉದ್ದೇಶ ಅವರೊಬ್ಬರನ್ನು ಮಾತ್ರವೇ ಕೊಲ್ಲುವುದಾಗಿತ್ತು ಎಂದು ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.