ಸೂರತ್: ಗುಜರಾತ್ ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು 300 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ದೆಹಲಿ ಸಿಎಂ ಹಾಗೂ ಆಪ್ ರಾಷ್ಟ್ರೀಯ ಅಧ್ಯಕ್ಷ ಅರವಿಂದ ಕೇಜ್ರಿವಾಲ್ ಅವರು ಭರವಸೆ ನೀಡಿದ್ದಾರೆ.
ಸೂರತ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುಜರಾತ್ನಲ್ಲಿ 27 ವರ್ಷಗಳಿಂದ ಒಂದೇ ಪಕ್ಷ ಆಡಳಿತದಿಂದ ಬೇಸತ್ತಿರುವ ಜನರು ಬದಲಾವಣೆ ಬಯಸುತ್ತಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಗೃಹಬಳಕೆ ಗ್ರಾಹಕರಿಗೆ 300 ಯುನಿಟ್ ವಿದ್ಯುಚ್ಛಕ್ತಿ ಉಚಿತವಾಗಿ ನೀಡಲಿದ್ದೇವೆ. ನಗರ ಹಾಗೂ ಗ್ರಾಮಗಳಲ್ಲಿ ವಾರದ ಎಲ್ಲ ದಿನಗಳ 24 ಗಂಟೆಯೂ ವಿದ್ಯುತ್ ಪೂರೈಕೆಯಾಗುವಂತೆ ಮಾಡುತ್ತೇವೆ ಎಂದು ಕೇಜ್ರಿವಾಲ್ ತಿಳಿಸಿದರು.
ಆಡಳಿತ ಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಹಲವು ಪಕ್ಷಗಳು ಚುನಾವಣೆಗೆ ಮುನ್ನ ಬಂದು ಜನರಿಗೆ ಸುಳ್ಳು ಭರವಸೆ ನೀಡುವುದನ್ನು ನೋಡಿದ್ದೇವೆ. ಚುನಾವಣೆ ಬಳಿಕ ನೀಡಿದ ಭರವಸೆಯನ್ನು ಮರೆಯುತ್ತಾರೆ. ನಾವು ಚುನಾವಣಾ ಗಿಮಿಕ್ಗಳನ್ನು ಹೇಳುವುದಿಲ್ಲ. ನಾವು ಏನು ಹೇಳುತ್ತೇವೆಯೋ ಅದನ್ನು ಮಾಡುತ್ತೇವೆ ಇದು ಖಂಡಿತ ಎಂದಿದ್ದಾರೆ.










