ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ…

51
firstsuddi

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ. ನೋಂದಣಿ ಪ್ರಕ್ರಿಯೆ ನಿರಂತರವಾಗಿರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಗೃಹಲಕ್ಷ್ಮೀ ಯೋಜನೆ ಸ್ಥಗಿತ ಎಂಬ ಮಾಹಿತಿ ಪ್ರಕಟವಾದ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಕೆಲವರ ಅಚಾತುರ್ಯದಿಂದ ಈ ರೀತಿ ಆಗಿದ್ದು, ಇದು ನಿರಂತರವಾಗಿ ನಡೆಯುವ ಯೋಜನೆ. ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹರಡಿದವರಿಗೆ ನೋಟಿಸ್ ಜಾರಿ ಮಾಡುತ್ತೇವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸಚಿವರು ತಿಳಿಸಿದರು.

ಈ ಕುರಿತು ಇಲಾಖೆಯ ಕಾರ್ಯದರ್ಶಿ, ನಿರ್ದೇಶಕರೊಂದಿಗೆ ಸಭೆ ನಡೆಸಿದ್ದು, ಸಂಬಂಧಿಸಿದವರ ಮೇಲೆ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.
ಇದುವರೆಗೂ ಸುಮಾರು 63 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ. ನಮ್ಮ ಇಲಾಖೆಯಿಂದ ಈಗಾಗಲೇ ಹಣ ವರ್ಗಾವಣೆ ಆಗಿದೆ. ಬ್ಯಾಂಕ್​ನಿಂದ ಮಾತ್ರ ಹಣ ಸ್ಲೋ ಆಗಿದೆ. ಇನ್ನು ನಾಲ್ಕೈದು ದಿನಗಳಲ್ಲಿ ಎಲ್ಲರಿಗೂ ಹಣ ವರ್ಗಾವಣೆ ಆಗುತ್ತೆ. ನಿಧಾನವಾಗಿ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ಆಗುತ್ತಿದೆ. ಫಲಾನುಭವಿಗಳಿಗೆ ನಮ್ಮ ಇಲಾಖೆಯಿಂದ ಹಣ ಕಳುಹಿಸುತ್ತಿದ್ದೇವೆ. ಹೊಸದಾಗಿ ನೋಂದಣಿ ಮಾಡಿಕೊಂಡವರಿಗೂ ಲಾಭ ಸಿಗುತ್ತಿದೆ. ಗೃಹಲಕ್ಷ್ಮೀ ನಿರಂತರವಾಗಿ ನಡೆಯುವ ಯೋಜನೆ ಎಂದು ತಿಳಿಸಿದರು.