ಗೋಪೂಜೆ ವೇಳೆ ಬಂಗಾರದ ಸರ ನುಂಗಿದ ಹಸು- ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು…

69
firstsuddi

ಶಿವಮೊಗ್ಗ: ಗೋಪೂಜೆ ವೇಳೆ ಪೂಜೆಗಿಟ್ಟಿದ್ದ ಬಂಗಾರದ ಸರವನ್ನು ಹಸುವೊಂದು ನುಂಗಿದ್ದು, ಬಳಿಕ ಪಶುವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಬಂಗಾರದ ಸರವನ್ನು ಹೊರತೆಗೆದ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಮತ್ತಿಮನೆ ಗ್ರಾಮದಲ್ಲಿ ನಡೆದಿದೆ.

ಮತ್ತಿಮನೆ ಗ್ರಾಮದ ಶ್ಯಾಮ ಉಡುಪ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಗೋಪೂಜೆಗೆಂದು ತೆಗೆದಿಟ್ಟಿದ್ದ ಸರ ಇದ್ದಕ್ಕಿದ್ದಂತೆ ಮಾಯವಾಗಿತ್ತು. ಶ್ಯಾಮ ಉಡುಪ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಆದರೆ ಎಲ್ಲೂ ಸಿಗದಿದ್ದಾಗ, ಪ್ರಸಾದದ ಜೊತೆ ಬಂಗಾರದ ಸರವನ್ನೂ ಹಸು ನುಂಗಿರಬಹುದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಬಂಗಾರದ ಸರ ಹೋದರೆ ಹೋಗಲಿ ಎಂದು ಕುಟುಂಬಸ್ಥರು ಮೊದಲಿಗೆ ಸುಮ್ಮನಿದ್ದರು. ಆದರೆ ಬಳಿಕ ಹಸು ಮೇವು ತಿನ್ನುವುದನ್ನು ಕಡಿಮೆ ಮಾಡಿ ಅಸ್ವಸ್ಥಗೊಳ್ಳುತ್ತಿದ್ದುದು ಗಮನಕ್ಕೆ ಬಂದಿತ್ತು. ನಂತರ ಹಸುವಿನ ಪ್ರಾಣಕ್ಕೆ ಕುತ್ತು ತರಬಹುದು ಎಂಬ ಆತಂಕದಿಂದ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.

ಪಶು ವೈದ್ಯ ಡಾ. ಆನಂದ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಹಸುವಿನ ದೇಹದಿಂದ ಚಿನ್ನದ ಸರವನ್ನು ಹೊರ ತೆಗೆಯುವಲ್ಲಿ  ಸಫಲರಾಗಿದ್ದಾರೆ. ಸದ್ಯ ಹಸು ಈಗ ಆರೋಗ್ಯವಾಗಿದೆ.