ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ದೇಹದಲ್ಲಿ 9 ಗುಂಡು ಪತ್ತೆ…

37
firstsuddi

ನವದೆಹಲಿ: ಗ್ಯಾಂಗ್‌ಸ್ಟರ್‌, ಪಾತಕಿ ಹಾಗೂ ಮಾಜಿ ಸಂಸದ ಅತೀಕ್‌ ಅಹ್ಮದ್‌ ತಲೆಗೆ ಒಂದು ಗುಂಡು ಸೇರಿದಂತೆ ದೇಹದಲ್ಲಿ 9 ಗುಂಡುಗಳು ಹೊಕ್ಕಿವೆ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್ ದೇಹದಲ್ಲಿ 5 ಗುಂಡುಗಳು ಹೊಕ್ಕಿವೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ.

ಅತೀಕ್ ಅಹ್ಮದ್ ತಲೆಗೆ ಒಂದು, ಎದೆ ಹಾಗೂ ಬೆನ್ನಿನ ಭಾಗಕ್ಕೆ ಎಂಟು ಬಾರಿ ಗುಂಡು ಹಾರಿಸಿರುವುದು ಶವಪರೀಕ್ಷೆಯಲ್ಲಿ ಪತ್ತೆಯಾಗಿದೆ. ಮತ್ತೊಂದೆಡೆ, ಮೂವರು ಶೂಟರ್‌ಗಳಾದ ಅರುಣ್‌ ಮೌರ್ಯ, ಸನ್ನಿ ಸಿಂಗ್‌ ಹಾಗೂ ಲವ್‌ ಲೇಶ್‌ ತಿವಾರಿಯನ್ನು ಶನಿವಾರ ರಾತ್ರಿಯೇ ಬಂಧಿಸಿದ್ದ ಪ್ರಯಾಗ್‌ರಾಜ್‌ ಪೊಲೀಸರು ನಿನ್ನೆ ಮ್ಯಾಜಿಸ್ಪ್ರೇಟ್‌ ಎದುರು ಹಾಜರುಪಡಿಸಿದ್ದಾರೆ. ಆರೋಪಿಗಳನ್ನು 14 ದಿನಗಳ ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ.

ಉಮೇಶ್‌ ಪಾಲ್‌ ಹತ್ಯೆ ಆರೋಪ ಪ್ರಕರಣದಲ್ಲಿ ಅತೀಕ್‌ ಅಹ್ಮದ್‌ನನ್ನು ಬಂಧಿಸಲಾಗಿತ್ತು. ಪ್ರಯಾಗ್‌ರಾಜ್‌ ನ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಪೊಲೀಸರು ಕರೆತಂದಿದ್ದ ವೇಳೆ ಪತ್ರಕರ್ತರ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಅತೀಕ್‌ ಅಹ್ಮದ್‌ಗೆ ಮೊದಲು ತಲೆಗೆ ಗುರಿಯಿಟ್ಟು ಗುಂಡು ಹೊಡೆದರು. ನಂತರ ಆತನ ಸಹೋದರನಿಗೂ ಗುಂಡು ಹಾರಿಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ತಕ್ಷಣ ಎಚ್ಚೆತ್ತ ಪೊಲೀಸರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದರು. ಅಷ್ಟರಲ್ಲಾಗಲೇ ಪಾತಕಿ ಅಹ್ಮದ್‌ ಮೇಲೆ ಹಲವು ಸುತ್ತಿನ ಗುಂಡು ಹಾರಿಸಲಾಗಿತ್ತು. ಅಹ್ಮದ್‌ ಮತ್ತು ಆತನ ಸಹೋದರ ಅಶ್ರಫ್‌ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದರು. ಏಪ್ರಿಲ್ 13 ರಂದು, ಝಾನ್ಸಿಯಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಅಹ್ಮದ್, ಅವರ ಮಗ ಮತ್ತು ಅವರ ಸಹಚರರೊಬ್ಬರನ್ನು ಹತ್ಯೆ ಮಾಡಲಾಗಿತ್ತು.