ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ – ಕೇಂದ್ರ ಸರ್ಕಾರದಿಂದ ಮತ್ತೆ ವಿರೋಧ…

36
firstsuddi

ನವದೆಹಲಿ : ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡುವುದನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ವಿರೋಧಿಸಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ನೇತೃತ್ವದ ಪೀಠವು ನಾಳೆ ಈ ಕುರಿತು ವಿಚಾರಣೆ ನಡೆಸಲಿದೆ. ಇದೀಗ ವಿಚಾರಣೆಗೆ ಒಂದು ದಿನ ಇರುವಾಗ ಕೇಂದ್ರವು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಲಿಂಗ ವಿವಾಹವು ಭಾರತದ ಸಾಮಾಜಿಕ ನೀತಿಗೆ ವಿರುದ್ಧವಾಗಿದೆ. ಇದನ್ನೂ ಸಮಾಜಮುಖಿಯಾಗಿ ಅನೇಕರು ವಿರೋಧ ಮಾಡುತ್ತಾರೆ. ಇದು ಭಿನ್ನ ಲಿಂಗೀಯ ಮದುವೆಯ ಮೇಲೆ ದೊಡ್ಡ ಪರಿಣಾಮವನ್ನು ಉಂಟುಮಾಡುತ್ತದೆ. ಸಲಿಂಗಿಗಳ ಮದುವೆ ಪರಿಕಲ್ಪನೆ ಹೊಸ ಸಾಮಾಜಿಕ ಸಂಸ್ಥೆಯನ್ನು ರಚಿಸುತ್ತದೆ. ಇದು ಮೂಲಭೂತವಾಗಿ ಶಾಸಕಾಂಗದ ಕಾರ್ಯವಾಗಿದ್ದು ನ್ಯಾಯಾಲಯಗಳು ನಿರ್ಧರಿಸುವ ವಿಷಯವಲ್ಲ. ಜನರ ಹಿತದೃಷ್ಟಿಯಿಂದ ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬೇಕು ಹಾಗೂ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ.

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ವಜಾಗೊಳಿಸುವಂತೆ ಕೇಂದ್ರವು ಅರ್ಜಿಯಲ್ಲಿ ಮನವಿ ಮಾಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಭಾರತದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ನಾಳೆ ವಿಚಾರಣೆಗೆ ನಿಗದಿಪಡಿಸಲಾಗಿದೆ. ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಎಸ್ ರವೀಂದ್ರ ಭಟ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಸಮಾಜದ ಮೇಲೆ ಪರಿಣಾಮಗಳನ್ನು ಉಂಟು ಮಾಡುವ ವಿಚಾರ ಮತ್ತು ವಿವಾದಾತ್ಮಕ ವಿಷಯದ ವಿಚಾರಣೆ ನಡೆಸಲಿದ್ದಾರೆ.

ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ತ್ರಿಸದಸ್ಯ ಪೀಠವು ಮಾರ್ಚ್ 13ರಂದು ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಐದು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ತಿಳಿಸಿ, ಸಮಿತಿಯನ್ನು ರಚನೆ ಮಾಡಿ ಈ ಮೂಲಕ ಸಲಿಂಗ ವಿವಾಹದ ಮೂಲ ಪ್ರಾಮುಖ್ಯತೆಯ ಬಗ್ಗೆ ವಿವರಿಸುವಂತೆ ತಿಳಿಸಿದೆ.