ಬೆಂಗಳೂರು: ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳಿಂದ ಹೊರೆಯಾಗುತ್ತಿರುವುದು ನಿಜ. ಆದರೆ, ಅದನ್ನು ನಾವು ಗೊತ್ತಿದ್ದೇ ಜಾರಿಗೆ ತಂದಿದ್ದೇವೆ. ಬಡವರಿಗಾಗಿ ಆಗುವ ಹೊರೆಯನ್ನು ನಾವು ಸಹಿಸಿಕೊಳ್ಳಬೇಕು ಅಷ್ಟೆ ಎಂದು ಹೇಳಿದರು.
ಬಿಜೆಪಿಯವರಿಗೆ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗುವುದು ಬೇಕಿಲ್ಲ. ಹೇಗಾದರು ಮಾಡಿ ಗ್ಯಾರಂಟಿ ಯೋಜನೆಗಳನ್ನು ಹತ್ತಿಕ್ಕಬೇಕು ಎನ್ನುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಉದ್ದೇಶ ಬಡವರಿಗೋಸ್ಕರ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಿದ್ದೇವೆ. ಬಡವರಿಗೆ ಹಣ ಕೊಡುವುದು ಬಿಜೆಪಿಯವರಿಗೆ ಮನಸ್ಸಿಲ್ಲ ಎಂದರೆ ಬಿಜೆಪಿಯವರ ಸಿದ್ಧಾಂತ ಏನಿದೆ ಎಂಬುದು ಅರ್ಥವಾಗುತ್ತದೆ. ಬಿಜೆಪಿಯವರು ಬಡವರ ಪರ ಇಲ್ಲ. ಪ್ರತಿಭಟನೆ ಮೂಲಕ ಸಾರ್ವಜನಿಕವಾಗಿ ಅದನ್ನು ಹೇಳಲು ಹೊರಟಿದ್ದಾರೆ. ಇದೆಲ್ಲವನ್ನು ಜನ ಗಮನಿಸುತ್ತಾರೆ ಎಂದು ಟೀಕಿಸಿದರು.
ಆದಾಯ ತೆರಿಗೆದಾರರು ಮತ್ತು ಸರ್ಕಾರಿ ನೌಕರರು ಸೇರಿದಂತೆ ಅನೇಕ ಜನರು ಈ ಯೋಜನೆಗಳಿಂದ ಹೊರಬಂದಿದ್ದಾರೆ ಎಂದು ಸಚಿವರು ಹಂಚಿಕೊಂಡರು. ಎಲ್ಲರೂ ಅದೇ ರೀತಿ ಮುಂದುವರಿದರೇ ಬಡವರಿಗೆ ಅನುಕೂಲ ಆಗುತ್ತದೆ ಎಂದು ಹೇಳಿದರು. ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕಾರ್ಡ್ದಾರರಿಗೆ ಮಾತ್ರ ಖಾತರಿ ಯೋಜನೆಗಳನ್ನು ಒದಗಿಸಬೇಕು ಎಂಬ ತುರುವೇಕೆರೆ ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ಅವರ ಸಲಹೆ ನೀಡಿದ್ದಾರೆ. ವಿರೋಧ ಪಕ್ಷಗಳು ಸಲಹೆಗಳನ್ನು ನೀಡಿದರೆ ಸರ್ಕಾರ ಚರ್ಚೆಗೆ ಮುಕ್ತವಾಗಿದೆ ಎಂದು ಸ್ಪಷ್ಟಪಡಿಸಿದರು.










