ಚಿಕ್ಕಮಗಳೂರು: ಚಾಂಪಿಯನ್ ಟ್ರೋಫಿ-2022 ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಪರ್ಶ ಆಸ್ಪತ್ರೆ ತಂಡ ಚಾಂಪಿಯನ್…

172

ಚಿಕ್ಕಮಗಳೂರು : ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಅರಳುಗುಪ್ಪೆ ಮಲ್ಲೇಗೌಡ ಆಸ್ಪತ್ರೆಯಿಂದ ನಗರದಲ್ಲಿ ನಡೆದ ಚಾಂಪಿಯನ್ ಟ್ರೋಫಿ-2022 ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಪರ್ಶ ಆಸ್ಪತ್ರೆ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಬೈಪಾಸ್ ರಸ್ತೆಯ ಆಟದ ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸ್ಪರ್ಶ ತಂಡ ಅರಳುಗುಪ್ಪೆ ಮಲ್ಲೇಗೌಡ ಆಸ್ಪತ್ರೆ ತಂಡವನ್ನು 22 ರನ್‍ಗಳಿಂದ ಮಣಿಸಿ ಭರ್ಜರಿ ಗೆಲುವನ್ನು ದಾಖಲಿಸಿತು.
ಪಂದ್ಯಾವಳಿಯ ಅತ್ಯುತ್ತಮ ಬ್ಯಾಟ್ಸ್‍ಮನ್ ಆಗಿ ಡಾ|| ಸುಜಿತ್, ಅತ್ಯುತ್ತಮ ಬೌಲರ್ ಆಗಿ ಮಹೇಶ್ ಹೊರಹೊಮ್ಮಿದರು, ಪಂದ್ಯಾವಳಿಯ ನಂತರ ನಡೆದ ವರ್ಣರಂಜಿತ ಸಮಾರಂಭದಲ್ಲಿ ಜಿಲ್ಲಾ ಸರ್ಜನ್ ಡಾ|| ಮೋಹನ್ ಕುಮಾರ್ ವಿಜೇತ ತಂಡಕ್ಕೆ ಟ್ರೋಫಿ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು ಸದಾ ಒತ್ತಡದ ನಡುವೆ ಕಾರ್ಯನಿರ್ವಹಿಸುವ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂಧಿಗಳಿಗೆ ಅದರಿಂದ ಹೊರಬರಲು ಕ್ರೀಡಾ ಚಟುವಟಿಕೆ ಅತ್ಯಂತ ಅಗತ್ಯ ಎಂದರು.
ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ಉಲ್ಲಸಿತವಾಗುತ್ತದೆ, ಮಾನಸಿಕ, ದೈಹಿಕ ಆರೋಗ್ಯ ಸಧೃಡವಾಗುತ್ತದೆ ಎಂದು ಕಿವಿಮಾತು ಹೇಳಿದರು.ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಜಿಲ್ಲೆಯ 10 ತಂಡಗಳು ಪಾಲ್ಗೊಂಡಿದ್ದವು.