ಕೊಟ್ಟಿಗೆಹಾರ:ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಬಾರಿ ವಾಹನಗಳ ಸಂಚಾರ ನಿಷೇದಿಸಿದ್ದು ಚಾರ್ಮಾಡಿ ಘಾಟ್‍ನ ಮದ್ಯ ಭಾಗದಲ್ಲಿ ಬರುವ ಬಾಂಜಾರ್ ಎಂಬ ಊರಿನಲ್ಲಿ ಮಂಗಳೂರಿನ ಖಾಸಗಿ ಕಂಪನಿಯವರು ಜನವಿದ್ಯುತ್ ಘಟಕದ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿಗೆ ಬೇಕಾದ ಸಾಮಾಗ್ರಿಗಳನ್ನು ಹೊತ್ತ 12 ಚಕ್ರದ ಲಾರಿಗಳು ಕೊಟ್ಟಿಗೆಹಾರದ ಬಂದು ಒಂದು ವಾರ ಕಳೆದಿದ್ದು ಮುಂದೆ ಹೋಗಲಾಗದೆ ಚಾಲಕರು ಹಾಗೂ ನಿರ್ವಾಹಕರು ಪರಿತಪಿಸುತ್ತಿದ್ದಾರೆ.
ಶಿರಾಡಿ ಘಾಟ್ ಮತ್ತು ಮಡಿಕೇರಿ ಮಂಗಳೂರು ರಸ್ತೆ ಅತಿವೃಷ್ಟಿಯಿಂದ ಬಂದ್ ಆಗಿರುವುದರಿಂದ ಮಂಗಳೂರು ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಅತಿಯಾದ ವಾಹನಗಳು ಸಂಚರಿಸುತ್ತಿವೆ.
ಚಾರ್ಮಾಡಿ ಘಾಟ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ಜಿಲ್ಲಾಧಿಕಾರಿಗಳು ಬಾರಿ ಗಾತ್ರದ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು ಇದರಿಂದ ಚಾರ್ಮಾಡಿ ಘಾಟ್‍ನ ಮದ್ಯ ಭಾಗದಲ್ಲಿರುವ ಭಾಂಜಾರಿಗೆ ದಾರಿ ಇಲ್ಲದೆ ಚಾಲಕರು ಪರದಾಡುತ್ತಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಚಾಲಕರು ನಾವು ಕೊಟ್ಟಿಗೆಹಾರಕ್ಕೆ ಬಂದು ಒಂದು ವಾರವಾಗಿದೆ. ಮುಂದೆ ಹೋಗಲು ಪೋಲಿಸರು ಬಿಡುತ್ತಿಲ್ಲ. ನಾವು ಕೊಟ್ಟಿಗೆಹಾರದಿಂದ 15 ಕಿ.ಮಿ ಚಾರ್ಮಾಡಿ ಘಾಟ್ ನಡುವೆ ಇರುವ ಬಾಂಜಾರ್ ಗ್ರಾಮಕ್ಕೆ ಹೋಗಬೇಕಿದೆ. ವಿದ್ಯುತ್ ಘಟಕದ ಅಧಿಕಾರಿಗಳಿಗೆ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಮುಂದೆ ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕಿದೆ ಎಂದು ತಿಳಿಸಿದ್ದಾರೆ.
ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಘನವಾಹನಗಳಿಗೆ ಇದುವರೆಗೂ ಹಣ ಪಡೆದು ಅಧಿಕಾರಿಗಳು ವಾಹನಗಳನ್ನು ಬಿಡುತ್ತಿದ್ದರು. ಹಾಗೆ ಬಿಡುತ್ತಾರೆ ಎಂದು ಕೊಂಡು ಈ ಮಾರ್ಗವಾಗಿ ಬೃಹತ್ ಲಾರಿಗಳು ಬಂದಿವೆ. ಈಗ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಈ ಚಾಲಕರಿಗೆ ಈ ಪರಿಸ್ಥಿತಿ ಬಂದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.