ಚಿಕ್ಕಮಗಳೂರು : ಭಾರೀ ಮಳೆಯಾದ ಪರಿಣಾಮ ವ್ಯಕ್ತಿಯ ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸಲು ದಾರಿ ಇಲ್ಲದೇ ಎರಡು ದಿನಗಳ ಕಾಲ ಮೃತದೇಹವನ್ನು ಮನೆಯಲ್ಲೇ ಇಟ್ಟುಕೊಂಡ ಘಟನೆ ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಸಮೀಪದ ಎಸ್. ಬೊಮ್ಮೇನಹಳ್ಳಿಯಲ್ಲಿ ನಡೆದಿದೆ.
ಕಡೂರು ತಾಲೂಕಿನ ಚಿಕ್ಕ ದೇವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್. ಬೊಮ್ಮನಹಳ್ಳಿಯಲ್ಲಿ ಪ್ರಮೋದ್(55) ಎಂಬವರು ಮೃತಪಟ್ಟಿದ್ದರು. ಆದರೆ ಹಲವು ವರ್ಷಗಳ ನಂತರ ದೇವನೂರು ಕೆರೆ ತುಂಬಿ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿತ್ತು. ಇದರಿಂದಾಗಿ ಈ ಗ್ರಾಮದಿಂದ ಸ್ಮಶಾನಕ್ಕೆ ಹೋಗುವ ದಾರಿಯೂ ನೀರಿನಿಂದ ಜಲಾವೃತವಾಗಿ ಮೃತದೇಹ ಕೊಂಡೊಯ್ಯಲು ಸಾಧ್ಯವಾಗದೆ ಎರಡು ದಿನಗಳ ಕಾಲ ಕಾದಿದ್ದಾರೆ.
ಎರಡು ದಿನದ ನಂತರ ನೀರಿನ ಹರಿವು ತುಸು ಕಡಿಮೆಯಾದ ಬಳಿಕ, ನೀರಲ್ಲೇ ಶವವನ್ನು ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ. ಶವ ಹೂಳಲು ಗುಂಡಿ ತೆಗೆಯಲು ಜೆಸಿಬಿ ಯಂತ್ರ ತರಿಸಿದರೆ ಅದು ಕೂಡ ಕೆಸರಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡು ಪರದಾಡಿದ್ದಾರೆ. ಎರಡ್ಮೂರು ಕಡೆ ಗುಂಡಿ ತೆಗೆದರೂ ಅಲ್ಲಿ ನೀರು ಬಂದು ತುಂಬಿಕೊಳ್ಳುತ್ತಿತ್ತು. ನಂತರ ಸ್ವಲ್ಪ ಎತ್ತರದ ಭಾಗದಲ್ಲಿ ಗುಂಡಿ ತೆಗೆದು ಅಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ.
ಕಳೆದ 10 ವರ್ಷಗಳಿಂದಲೂ ಇದೇ ಸಮಸ್ಯೆ ಇದೆ. ಆದರೆ ಜನಪ್ರತಿನಿಧಿಗಳ ಬಳಿ ಹಲವು ಬಾರಿ ಈ ಸಮಸ್ಯೆ ಬಗ್ಗೆ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯರು ಸರ್ಕಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಆಕ್ರೋಶ ಹೊರ ಹಾಕಿದ್ದಾರೆ.










