ಚಿಕ್ಕಮಗಳೂರು: ಕರ್ನಾಟಕದಲ್ಲಿ 6 ನಕ್ಸಲರು ಮುಖ್ಯ ವಾಹಿನಿಗೆ ಬರಲು ಒಪ್ಪಿದ್ದಾರೆ. ವಿಕ್ರಂಗೌಡ ಎನ್‍ಕೌಂಟರ್ ಪ್ರಕರಣದ ಬೆನ್ನಲ್ಲೇ ಕರ್ನಾಟಕದ ಮುಂಡಗಾರು ಲತಾ, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ಲೂರು, ಮಾರಪ್ಪ ಅರೋಲಿ, ತಮಿಳುನಾಡಿನ ಕೆ ವಸಂತ, ಕೇರಳದ ಟಿ.ಎನ್ ಜೀಶಾ, ಮತ್ತು ಮಾರಪ್ಪ ಅರೋಲಿ ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ಬರಲು ಮುಂದಾಗಿದ್ದಾರೆ. ಇಂದು ಬೆಳಗ್ಗೆ 6 ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದಾರೆ. ಈಗಾಗಲೇ ನಕ್ಸಲರ ಜೊತೆ ಶರಣಾಗತಿ ಸಮಿತಿ ಮತ್ತು ಶಾಂತಿಗಾಗಿ ನಾಗರೀಕ ಸಮಿತಿ ನಡೆಸಿದ ಮಾತುಕತೆ ಯಶಸ್ವಿಯಾಗಿ ನಡೆದಿದೆ. ಮುಂಡಗಾರು ಲತಾ ವಿರುದ್ಧ 59 ಪ್ರಕರಣಗಳು ದಾಖಲಾಗಿವೆ. ಸುಂದರಿ ವಿರುದ್ಧ ಉಡುಪಿ, ದಕ್ಷಿಣ ಕನ್ನಡದಲ್ಲಿ ಮೂರು ಕೇಸ್‍ಗಳು, ಜಯಣ್ಣ ಮೇಲೆ ಉಡುಪಿ, ಮಂಗಳೂರಿನಲ್ಲಿ ಮೂರು ಪ್ರಕರಣಗಳಿವೆ, ವನಜಾಕ್ಷಿ ವಿರುದ್ಧ 15 ಕೇಸ್ ದಾಖಲಾಗಿವೆ. ಕೆ. ವಸಂತ ಮತ್ತು ಟಿ.ಎನ್ ಜೀಶಾ ವಿರುದ್ಧ ಹಲವಾರು ಕೇಸ್‍ಗಳಿವೆ. ಮುಂಡಗಾರು ಲತಾ ಶೃಂಗೇರಿಯ ಜೆ.ಸಿ.ಬಿ.ಎಂ. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ನಂತರ ಪಿಯುಸಿ ವ್ಯಾಸಂಗ ಅರ್ಧಕ್ಕೆ ಬಿಟ್ಟುಹೋಗಿದ್ದಾರೆ. ಕುದುರೆಮುಖ ವಿಮೋಚನಾ ಚಳುವಳಿ ಮುಖಾಂತರ ನಕ್ಸಲ್ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಉಳಿಸಿ ವಿರೋಧಿ ಹೋರಾಟ ಸಮಿತಿಯ ನಾಯಕಿಯಾಗಿದ್ದರು. ದ.ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕುತ್ಲೂರಿನ ನಿವಾಸಿಯಾಗಿದ್ದ ಸುಂದರಿ ಸಹೋದರ ವಸಂತ ಅಲಿಯಾಸ್ ಆನಂದ್ ಕೂಡ ನಕ್ಸಲ್ ಆಗಿದ್ದನು. ಸಹೋದರನ ಹಿಂದೆಯೇ ಸುಂದರಿ ಕೂಡ ನಕ್ಸಲ್ ಚಟುವಟಿಕೆಗೆ ಸೇರಿದ್ದರು. 2010ರ ಎನ್‍ಕೌಂಟರ್‍ನಲ್ಲಿ ಆನಂದ್ ಕೊಲೆಯಾಗಿದ್ದ. ಕುದುರೆಮುಖ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಾಯಕಿ ಸುಂದರಿ ಕೂಡ ಇದ್ದಾರೆ.