ಚಿಕ್ಕಮಗಳೂರು : ಕೊರೊನಾ ಮಹಾಮಾರಿಯಿಂದಾಗಿ ಸ್ಥಗಿತಗೊಂಡಿದ್ದ ಹಿರಿಯ ಪ್ರಾಥಮಿಕ ಶಾಲೆಗಳು ಸೋಮವಾರ ಪುನರಾರಂಭಗೊಂಡ ಹಿನ್ನೆಲೆಯಲ್ಲಿ ನಗರದ ಆಜಾದ್ಪಾರ್ಕ್ ಕನ್ನಡ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ವಿದ್ಯಾರ್ಥಿಗಳಿಗೆ ಹೃದಯಸ್ಪರ್ಶಿ ಸ್ವಾಗತ ನೀಡಿದರು.
ಒಂದೂವರೆ ವರ್ಷಗಳಷ್ಟು ಸುಧೀರ್ಘ ಅವಧಿಯ ನಂತರ ಶಾಲೆ ಮರು ಆರಂಭ ಗೊಂಡ ಹಿನ್ನೆಲೆಯಲ್ಲಿ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ ಹಬ್ಬದ ವಾತಾವರಣವನ್ನು ನಿರ್ಮಿಸಲಾಗಿತ್ತು.
ಬಹಳ ದಿನಗಳ ನಂತರ ಶಾಲೆ ಆರಂಭಗೊಂಡಿದ್ದರಿಂದಾಗಿ ಸಡಗರ ಸಂಭ್ರಮ ಮತ್ತು ಹುರುಪಿನಿಂದ ಬೆಳಿಗ್ಗೆ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳ ಮೇಲೆ ಶಿಕ್ಷಕರು ಪುಷ್ಪವೃಷ್ಟಿ ಮಾಡಿ ಕೈ ಹಿಡಿದು ಬರಮಾಡಿಕೊಂಡು ಅವರ ಕೈಗಳನ್ನು ಸ್ಯಾನಿಟೈಸರ್ ನಿಂದ ಸ್ವಚ್ಛಗೊಳಿಸಿದರು.
ನಂತರ ಕೊರೊನಾ ಸೋಂಕಿನಿಂದ ಪಾರಾಗುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮಾಸ್ಕ್ಧರಿಸುವುದು ಸೇರಿದಂತೆ ಅನುಸರಿಸಬೇಕಾದ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಕರು ವಿವರಿಸಿದರು.
ಈ ವೇಳೆ ಮಾತನಾಡಿದ ಮುಖ್ಯಶಿಕ್ಷಕಿ ಬಿ.ಆರ್.ಗೀತಾ, ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರಾದಿದ್ದರಿಂದಾಗಿ ಇದುವರೆಗೂ ಶಾಲೆ ಬಿಕೋ ಎನ್ನುತ್ತಿತ್ತು. ಶಿಕ್ಷಕರಿಗೂ ಸಹ ಮಕ್ಕಳಿಲ್ಲದೇ ಕಾರ್ಯನಿರ್ವಹಿಸುವುದು ಬೇಸರದ ಸಂಗತಿಯಾಗಿತ್ತು. ಇದೀಗ ವಿದ್ಯಾರ್ಥಿಗಳು ಆಗಮಿಸಿರುವುದು ಶಿಕ್ಷಕ ವೃಂದಕ್ಕೆ ಸಂತಸ, ಸಡಗರ ಸಂಭ್ರಮ ತಂದಿದೆ ಎಂದರು.
ತನ್ನ ಅನಿಸಿಕೆ ಹಂಚಿಕೊಂಡ 6ನೇ ತರಗತಿ ವಿದ್ಯಾರ್ಥಿ ಅಭಿಷೇಕ್, ಕಳೆದ ಒಂದೂವರೆ ವರ್ಷಗಳಿಂದ ಆಟ, ಪಾಠವಿಲ್ಲದೇ ಮನೆಯಲ್ಲೇ ಕುಳಿತು ಮನಸ್ಸು ಮತ್ತು ದೇಹ ಜಡ್ಡುಗಟ್ಟಿದಂತಾಗಿತ್ತು. ಇದೀಗ ಮತ್ತೆ ಶಾಲೆಗೆ ಬರುವಂತಾಗಿರುವುದು ಖುಷಿ ತಂದಿದೆ ಎಂದು ಹೇಳಿದನು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರಸಮನ್ವಯಾಧಿಕಾರಿ ಜಯರಾಮ್, ತಾಲ್ಲೂಕು ಅಕ್ಷರ ದಾಸೋಹದ ಸಹಾಯಕ ಅಧಿಕಾರಿ ಉದಯ್ಕುಮಾರ್, ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್, ಶಿಕ್ಷಕರಾದ ಎಸ್.ಇ.ಲೋಕೇಶ್ವರಾಚಾರ್, ಸಾವಿತ್ರಿ, ನಾಗವೇಣಿ ಹಾಜರಿದ್ದರು.










