ಚಿಕ್ಕಮಗಳೂರು : ಒಂದೇ ಗ್ರಾಮದ 128 ಜನರಿಗೆ ಕೊರೊನಾ ಪಾಸಿಟಿವ್ ಬಂದಿರುವ ಘಟನೆ ತಾಲ್ಲೂಕಿನ ಇಂದಿರಾನಗರ ಗ್ರಾಮದಲ್ಲಿ ನಡೆದಿದೆ.
ಇಂದಿರಾನಗರ ಗ್ರಾಮದ ಸಂಜೀವ(60) ಎಂಬುವರು ಮೇ 14ರಂದು ಸಾವನ್ನಪ್ಪಿದ್ದರು. ಆಸ್ಪತ್ರೆಯವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದರು. ಹೀಗಾಗಿ ಮೃತನ ಅಂತ್ಯಕ್ರಿಯೆಯಲ್ಲಿ ಊರಿನ ಹಲವು ಜನ ಭಾಗವಹಿಸಿದ್ದರು. ಮೃತನ ಅಂತ್ಯಸಂಸ್ಕಾರ ಮಾಡಿ ಮನೆಗೆ ಬರುತ್ತಿದ್ದಂತೆ ಮೃತನ ಕೋವಿಡ್ ಟೆಸ್ಟ್ ವರದಿ ಪಾಸಿಟಿವ್ ಬಂದಿದೆ. ಮರು ದಿನ ಗ್ರಾಮದ ಸುಮಾರು 220ಕ್ಕೂ ಅಧಿಕ ಜನ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ. ಈ ವರದಿ ಬಂದಿದ್ದು, 128 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರಿಂದ ಜನರು ಕಂಗಾಲಾಗಿದ್ದಾರೆ.
ಇದೇ ಗ್ರಾಮದ ಮತ್ತೆ ಹಲವರ ವರದಿಯೂ ಬರಬೇಕಿದ್ದು, ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ಇದೇ ಗ್ರಾಮದ ಅಕ್ಕಪಕ್ಕದಲ್ಲಿ ಹತ್ತಾರು ಹೋಂ ಸ್ಟೇ ಹಾಗೂ ರೆಸಾರ್ಟ್ ಗಳಿವೆ. ಅಲ್ಲಿಗೆ ಹಲವರು ಕೂಲಿ ಕೆಲಸಕ್ಕೆ ಹೋಗುತ್ತಾರೆ. ಅವರಿಂದಲೂ ಸೋಂಕು ಬಂದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಕೇವಲ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಜನರಿಗೆ ಮಾತ್ರ ಸೋಂಕು ತಗಲಿದಿಯಾ ಅಥವಾ ಬೇರೆ ಕಡೆಯಿಂದಲೂ ಸೋಂಕು ತಗುಲಿರುವ ಸಾಧ್ಯತೆ ಇದೆಯಾ ಎಂಬ ಮಾಹಿತಿ ಪಡೆಯುತ್ತಿದ್ದಾರೆ.










