ಚಿಕ್ಕಮಗಳೂರು : ಕೇಸರಿ ಬಾವುಟ ವಿಚಾರಕ್ಕೆ ಎರಡು ಕೋಮುಗಳ ಮಧ್ಯೆ ಗಲಾಟೆ…

183
firstsuddi

ಚಿಕ್ಕಮಗಳೂರು : ಮಸೀದಿ ಮುಂಭಾಗ ಕಟ್ಟಿದ್ದ ಕೇಸರಿ ಬಾವುಟ ವಿಚಾರವಾಗಿ ಎರಡು ಕೋಮುಗಳ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ಶ್ರೀ ರಾಮಸೇನೆ ವತಿಯಿಂದ ದತ್ತಮಾಲಾ ಅಭಿಯಾನ ನಡೆಯುತ್ತಿದೆ. ಶೃಂಗೇರಿಯಲ್ಲೂ ಶ್ರೀ ರಾಮಸೇನೆ ಕಾರ್ಯಕರ್ತರು ಮಾಲೆ ಧರಿಸಿದ್ದು, ಶೃಂಗೇರಿ ಪಟ್ಟಣದಾದ್ಯಂತ ಕೇಸರಿ ಬಾವುಟ, ಬಂಟಿಂಗ್ಸ್‌ಗಳನ್ನು ಕಟ್ಟಿದ್ದರು.

ಶೃಂಗೇರಿ ಪಟ್ಟಣದ ವೆಲ್ ಕಂ ಗೇಟ್ ಬಳಿ ಇರುವ ಮಸೀದಿ ಮುಂಭಾಗ ಕೇಸರಿ ಬಾವುಟ ಹಾಗೂ ಬಂಟಿಂಗ್ಸ್ ಕಟ್ಟಿದ್ದಕ್ಕೆ ಶ್ರೀರಾಮಸೇನೆ ಮುಖಂಡ ಅರ್ಜುನ್ ಹಾಗೂ ಪಟ್ಟಣ ಪಂಚಾಯತಿ ಸದಸ್ಯ ರಫೀಕ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರೂ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ. ಸದ್ಯ ಇಬ್ಬರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

ಈ ಬಗ್ಗೆ ಎಸ್ ಪಿ ಉಮಾ ಪ್ರಶಾಂತ್ ಪ್ರತಿಕ್ರಿಯಿಸಿದ್ದು, ಶೃಂಗೇರಿ ಪಟ್ಟಣದ ವೆಲ್ ಕಂ ಗೇಟ್ ಬಳಿ ಇರುವ ಮಸೀದಿ ಮುಂಭಾಗ ದತ್ತಮಾಲಾ ಅಭಿಯಾನದ ಹಿನ್ನೆಲೆಯಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರು ಕೇಸರಿ ಬಾವುಟ ಹಾಗೂ ಬಂಟಿಂಗ್ಸ್ ಗಳನ್ನು ಕಟ್ಟಿದ್ದರು. ಬಾವುಟಗಳನ್ನು ಪೊಲೀಸರು ಪಟ್ಟಣ ಪಂಚಾಯಿತಿ ಸದಸ್ಯರ ಮೂಲಕ ತೆರವುಗೊಳಿಸಿದ್ದರು. ಆದರೆ ಈ ವಿಚಾರವಾಗಿ ಶ್ರೀರಾಮಸೇನೆ ಮುಖಂಡ ಅರ್ಜುನ್ ಹಾಗೂ ಪಟ್ಟಣ ಪಂಚಾಯತಿ ಸದಸ್ಯ ರಫೀಕ್ ನಡುವೆ ಮಾತಿನ ಚಕಮಕಿ ನಡೆದಿದೆ. ಸದ್ಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು.