ಚಿಕ್ಕಮಗಳೂರು : ಕೊರೋನ ಸೋಂಕು ತಗುಲಿದೆ ಎಂಬ ಅನುಮಾನ ದಲ್ಲಿ ಮಹಿಳೆಯೊಬ್ಬರನ್ನು ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರು ದಿನಗಳ ಹಿಂದೆ ಸಿಂಗಾಪುರಕ್ಕೆ ತೆರಳಿ ಹಿಂತಿರುಗಿರುವ ಮಹಿಳೆಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆದರೆ, ಜ್ವರ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಈಗ ಜಿಲ್ಲಾ ಆಸ್ಪತ್ರೆಯ ಬೇರ್ಪಡಿಸಿರುವ ವಾರ್ಡ್‍ಗೆ ಮಹಿಳೆಯನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಂಕಿತ ರೋಗಿಯ ರಕ್ತ, ಗಂಟಲು ದ್ರವವನ್ನು ಸಂಗ್ರಹಿಸಿ ಹಾಸನದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬರಬೇಕಾಗಿದೆ. ಚಿಕ್ಕಮಗಳೂರು ಮೂಲದ ಮಹಿಳೆ (ಸುಮಾರು 40 ವರ್ಷ)ಗೆ ಕೊರೋನ ಸೋಂಕಿನ ಅನುಮಾನದಲ್ಲಿ ಐಸೊಲೇಷನ್ ವಾರ್ಡ್‍ಗೆ ದಾಖಲಿಸಲಾಗಿದೆ.
ಇದರ ಬೆನ್ನ ಹಿಂದೆಯೇ ಕಲಬುರಗಿಯಲ್ಲಿ ಕೊರೋನ ವೈರಸ್ ಬಾಧೆಯಿಂದ ಮೃತಪಟ್ಟ ವ್ಯಕ್ತಿಯ ಮಗನೊಂದಿಗೆ ಮಾತನಾಡಿ ಮಾಹಿತಿ ಪಡೆದ ದೃಶ್ಯ ಮಾಧ್ಯಮದ ಇಬ್ಬರು ವರದಿಗಾರರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂಬ ಮಾಹಿತಿ ವರಿದಯಾಗಿದೆ.
ಕೊರೋನ ವೈರಸ್ ಭೀತಿ ಮದುವೆ ಸಮಾರಂಭಗಳಿಗೂ ತಟ್ಟಿದ್ದು ಹಲವು ಮದುವೆ ಸಮಾರಂಭಗಳು ಅತಿಥಿ ಸತ್ಕಾರವಿಲ್ಲದೇ ನಡೆಯಲಿದೆ.
ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ರವರು ತಮ್ಮ ಮಗಳ ಮದುವೆಯನ್ನು ಸರಳವಾಗಿ ಆಚರಿಸಲು ಹಾಗೂ ಮದುವೆಯನ್ನು ತಮ್ಮ ತೋಟದ ಮನೆಯಲ್ಲಿ ಕುಟುಂಬ ಸದಸ್ಯರ ಮಾತ್ರ ಭಾಗವಹಿಸುವಿಕೆಯಲ್ಲಿ ನಡೆಸಲು ನಿರ್ಧರಿಸಿದ್ದಾರೆ.
ರಾಜೇಗೌಡರ ಮಗಳು ಡಾ.ಸಂಜನ ರವರ ಮದುವೆಯನ್ನು ಜಗನ್ನಾಥ್ ಅತ್ತಿಕಟ್ಟೆ ರವರ ಮಗ ವಚನ್ ನೊಂದಿಗೆ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಮಾರ್ಚ್ 19ರಂದು ಬೆಳಿಗ್ಗೆ 10.40ಕ್ಕೆ ಏರ್ಪಡಿಸಲಾಗಿತ್ತು.
ಮದುವೆ ಸಮಾರಂಭಕ್ಕೆ ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಹೊಂದಿದ್ದ ಕುಟುಂಬ ವರ್ಗ ಈಗಿನ ಪರಿಸ್ಥಿತಿಯಲ್ಲಿ ಜವಾಬ್ದಾರಿಯಿಂದ ನಡೆದುಕೊಂಡು ಮದುವೆ ಸಮಾರಂಭವನ್ನು ಮನೆಯಲ್ಲಿ ಸರಳವಾಗಿ ಏರ್ಪಡಿಸಲು ನಿರ್ಧರಿಸಿದ್ದು, ಜ್ವರದ ಭೀತಿ ಇರುವುದರಿಂದ ಟಿ.ಡಿ.ರಾಜೇಗೌಡರವರು ಮತ್ತು ಕುಟುಂಬವರ್ಗ ಕುಳಿತು ಚರ್ಚಿಸಿ ಅತ್ಯಂತ ಪ್ರಯಾಸದ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈಗಾಗಲೇ ಸುಮಾರು 12 ಸಾವಿರಕ್ಕೂ ಹೆಚ್ಚು ಜನರಿಗೆ ಮದುವೆ ಆಮಂತ್ರಣ ಪತ್ರ ಕಳುಹಿಸಿರುವುದಾಗಿ ಮೂಲಗಳು ತಿಳಿಸಿವೆ.
ಕೊರೋನ ಭೀತಿಯಿಂದ ಸರ್ಕಾರ ಸೋಂಕು ಹೆಚ್ಚು ಜನರಿಗೆ ಹರಡದಿರಲು ಮುನ್ನೆಚ್ಚರಿಕಾ ಕ್ರಮವಾಗಿ ಸಭೆ ಸಮಾರಂಭಗಳು ಮತ್ತು ಜಾತ್ರೆ, ಸಂತೆಗಳನ್ನು ನಿಷೇಧಿಸಿರುವುದರಿಂದ ಹಾಗೂ ಸಾವಿರಾರು ಜನರು ಸೇರುವ ನಿರೀಕ್ಷೆ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಅವರು ತಿಳಿಸಿದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಕೊರೋನ ಎಫೆಕ್ಟ್ – ಕಾಂಗ್ರೆಸ್ ಶಾಸಕ ರಾಜೇಗೌಡ ಅವರ ಮಗಳ ಮದುವೆಯನ್ನು ಸರಳವಾಗಿ...










