ಚಿಕ್ಕಮಗಳೂರು ಜಿಲ್ಲಾ ಹಬ್ಬದ ಯಶಸ್ಸಿಗೆ ಭಾರತ ಸೇವಾದಳದ ಶಿಕ್ಷಕರು ಸಹಕಾರ ನೀಡಬೇಕು : ಹೆಚ್.ರವೀಶ್.

88
firstsuddi

ಚಿಕ್ಕಮಗಳೂರು : ಜಿಲ್ಲಾಡಳಿತ ಮುಂದಿನ ತಿಂಗಳು ನಗರದಲ್ಲಿ ಹಮ್ಮಿಕೊಂಡಿರುವ ಚಿಕ್ಕಮಗಳೂರು ಜಿಲ್ಲಾ ಹಬ್ಬದ ಯಶಸ್ಸಿಗೆ ಭಾರತ ಸೇವಾದಳದ ಶಿಕ್ಷಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಹೆಚ್.ರವೀಶ್ ಮನವಿ ಮಾಡಿದರು.

ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಇಂದು ನಡೆದ ಭಾರತ ಸೇವಾದಳ ಶಿಕ್ಷಕರ ಮಿಲಾಪ್ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಚಿಕ್ಕಮಗಳೂರು ಜಿಲ್ಲಾ ಹಬ್ಬಕ್ಕೆ ಸಿದ್ಧತೆಗಳು ಈಗಾಗಲೇ ಭರದಿಂದ ಸಾಗಿದೆ. ಆ ವೇಳೆ ನಡೆಯಲಿರುವ ಕ್ರೀಡಾಕೂಟದಲ್ಲಿ ಗ್ರಾಮೀಣ ಕ್ರೀಡೆಗಳು ಸೇರಿದಂತೆ ಹಲವು ಸ್ಪರ್ಧೆಗಳು ನಡೆಯಲಿದ್ದು, ಕ್ರೀಡಾಕೂಟಕ್ಕೆ ರಾಜ್ಯಮಟ್ಟದ ಕ್ರೀಡಾಪಟುಗಳು ಆಗಮಿಸಲಿದ್ದಾರೆ ಎಂದರು.

ಈ ಹಿನ್ನೆಲೆಯಲ್ಲಿ ಭಾರತ ಸೇವಾದಳದ ಶಿಕ್ಷಕರು ಮಕ್ಕಳನ್ನು ಕ್ರೀಡಾಕೂಟಕ್ಕೆ ಈಗಿನಿಂದಲೇ ತಯಾರು ಮಾಡಬೇಕು. ಕ್ರೀಡಾಕೂಟದಲ್ಲಿ ಎಲ್ಲಾ ಶಿಕ್ಷಕರೂ ಪಾಲ್ಗೊಂಡು ತಮಗೆ ವಹಿಸಲಾಗುವ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸುವ ಮೂಲಕ ಹಬ್ಬದ ಯಶಸ್ಸಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ಭಾರತ ಸೇವಾದಳದ ತಾಲ್ಲೂಕು ಅಧ್ಯಕ್ಷಜಿ.ಶಂಕರ್ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸೇವಾದಳ ಶಿಕ್ಷಕರು ದುಡಿಯಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸೇವಾ ದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ ಸೇವಾದಳದ ಇಡೀ ವರ್ಷದ ಕಾರ್ಯಕ್ರಮಗಳ ರೂಪುರೇಷೆಗಳನ್ನು ತಯಾರಿಸುವ ನಿಟ್ಟಿನಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಮಿಲಾಪ್ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಸೇವೆಯಿಂದ ನಿವೃತ್ತರಾದ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರೀಕ್ಷಕ ಪತ್ತಾರ್ ಅವರನ್ನು ಸನ್ಮಾನಿಸಲಾಯಿತು. ಭಾರತ ಸೇವಾದಳ ಶಾಖೆಗಳ ನಾಮಫಲಕಗಳನ್ನು ತಾಲ್ಲೂಕಿನ ಶಾಲೆಗಳಿಗೆ ವಿತರಿಸಲಾಯಿತು.

ಭಾರತ ಸೇವಾ ದಳದ ಜಿಲ್ಲಾ ಸಂಘಟಕ ಚಂದ್ರಕಾಂತ್, ತಾಲ್ಲೂಕು ಸಂಘಟಕ ಎಸ್.ಇ.ಲೋಕೇಶ್ವರಾಚಾರ್, ಸಿ.ಪಿ.ಓ ಛಲವಾದಿ ಕಾಳಯ್ಯ, ಕೆ.ಎನ್.ಕುಮಾರಸ್ವಾಮಿ, ಯತೀಶ್, ಕೆ.ಆರ್.ಶಿವಕುಮಾರ್ ಉಪಸ್ಥಿತರಿದ್ದರು.