ಚಿಕ್ಕಮಗಳೂರು : ದತ್ತ ಜಯಂತಿ-ನಿಯಮಗಳನ್ನು ಪಾಲಿಸಲು ಡಿಸಿ ಡಾ.ಬಗಾದಿ ಗೌತಮ್ ಸೂಚನೆ…

205
firstsuddi

ಚಿಕ್ಕಮಗಳೂರು : ತಾಲ್ಲೂಕಿನ ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಡಿಸೆಂಬರ್ 27 ರಿಂದ 29ರ ವರೆಗೆ ದತ್ತ ಜಯಂತಿ ಅಭಿಯಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಂತಿ, ಸುವ್ಯವಸ್ಥೆ ಹಾಗೂ ಶಿಸ್ತು ಪಾಲನಾ ದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಡಿ.27 ರಿಂದ 29ರ ವರೆಗೆ ಷರತ್ತುಬದ್ಧ ನಿಬಂಧನೆಗಳನ್ನು ವಿಧಿಸಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಡಿ. 27 ರಂದು ಮಹಿಳಾ ದತ್ತಭಕ್ತರು ಬೆಳಿಗ್ಗೆ 7:30 ರಿಂದ 10 ಗಂಟೆಯ ವರೆಗೆ ನಗರದಲ್ಲಿ ಅನುಸೂಯ ಜಯಂತಿಯನ್ನು ನಗರದ ಬೋಳರಾಮೇಶ್ವರ ದೇವಸ್ಥಾನದಿಂದ ಐ.ಜಿ.ರಸ್ತೆ ಮೂಲಕ ಕಾಮಧೇನು ಗಣಪತಿ ದೇವಸ್ಥಾನದವರೆಗೆ ಸುಮಾರು 400 ರಿಂದ 500 ಜನ ವಿವಿಧ ಜಿಲ್ಲೆಯ ಪದಾಧಿಕಾರಿಗಳು/ಮುಖಂಡರು ಮತ್ತು ಮಹಿಳಾ ದತ್ತ ಭಕ್ತರು ಅನುಸೂಯ ದೇವಿಯ ಸಂಕೀರ್ತನಾ ಯಾತ್ರೆ ಮೆರವಣಿಗೆ ಕಾರ್ಯಕ್ರಮವನ್ನು ನಡೆಸಿ ನಂತರ ಇನಾಂ ದತ್ತಾತ್ರೇಯ ಪೀಠಕ್ಕೆ ತೆರಳಿ ಶ್ರೀ ಅನುಸೂಯ ದೇವಿಯ ಪೂಜೆ, ಶ್ರೀ ಗಣಪತಿ ಹೋಮ ಮತ್ತು ಶ್ರೀ ದುರ್ಗಾ ಹೋಮವನ್ನು ಮಾಡಲಿದ್ದಾರೆ.
ಡಿ.28 ರಂದು ಭಜರಂಗದಳ, ವಿಶ್ವ ಹಿಂದೂ ಪರಿಷತ್ ಹಾಗೂ ಇನ್ನಿತರ ಹಿಂದೂಪರ ಸಂಘಟನೆಗಳ ಮುಖ್ಯಸ್ಥರುಗಳು ಹಲವು ಮಠಾಧೀಶರೊಂದಿಗೆ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ತೆರಳಿ ಹೋಮ ಹವನ ಮಾಡಲಿದ್ದಾರೆ.
ಬಳಿಕ ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆಯು ಮಧ್ಯಾಹ್ನ 2.00 ಗಂಟೆಯಿಂದ ಸಂಜೆ 7.00 ಗಂಟೆಯವರೆಗೆ ಕಾಮಧೇನು ಗಣಪತಿ ದೇವಸ್ಥಾನದಿಂದ ಬಸವನಹಳ್ಳಿ ಮುಖ್ಯ ರಸ್ತೆ, ಐ.ಜಿ.ರಸ್ತೆ ಮೂಲಕ ಅಜಾದ್ ಸರ್ಕಲ್‍ನಲ್ಲಿ ಗುರು ದತ್ತಾತ್ರೇಯ ಮೂರ್ತಿಯ ವಿಗ್ರಹಕ್ಕೆ ಜ್ಯೋತಿ ಬೆಳಗುವ ಮೂಲಕ ಮುಕ್ತಾಯಗೊಳಿಸಲಿದ್ದಾರೆ.
ಶೋಭಾಯಾತ್ರೆಯಲ್ಲಿ ಸುಮಾರು 1500 ರಿಂದ 2000 ದತ್ತ ಮಾಲಾಧಾರಿಗಳು ಭಾಗವಹಿಸಲಿದ್ದು, ಜಿಲ್ಲೆಯ ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು, ಆಲ್ದೂರು ಹಾಗೂ ಮೂಡಿಗೆರೆ ಪಟ್ಟಣಗಳಲ್ಲಿಯೂ ಸಹ ಶೋಭಾಯಾತ್ರೆ ಕಾರ್ಯಕ್ರಮವನ್ನು ನಡೆರಸಲಿದ್ದಾರೆ.
ಡಿ.29ರಂದು ಬಾಬಾ ಬುಡನ್‍ಗಿರಿ, ಶ್ರೀ ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮಕ್ಕೆ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಇತರೆ ಜಿಲ್ಲೆಗಳಿಂದ ಸಂಘಟನೆಗಳ ಕಾರ್ಯಕರ್ತರು, ಮಠಾಧೀಶರು, ರಾಜಕೀಯ ಮುಖಂಡರುಗಳು, ಮಹಿಳಾ ಸಂಘಟನೆಗಳ ಕಾರ್ಯಕರ್ತರು ಹಾಗೂ ದತ್ತ ಮಾಲಾಧಾರಿಗಳು ಸೇರಿದಂತೆ ಸುಮಾರು 5000 ರಿಂದ 6000 ಭಕ್ತಾಧಿಗಳು ಭಾಗವಹಿಸಲಿದ್ದಾರೆ.
ದತ್ತ ಮಾಲಾಧಾರಣೆ, ಮೆರವಣಿಗೆ, ಶೋಭಾಯಾತ್ರೆ ಹಾಗೂ ಧಾರ್ಮಿಕ ಸಭೆಗಳ ಸಮಯ, ಸ್ಥಳ ಮಾರ್ಗ ಇತ್ಯಾದಿ ವಿವರಗಳನ್ನು ಮತ್ತು ನೇತೃತ್ವ ವಹಿಸುವ ಸಂಘಟನೆಗಕರು/ಸಂಯೋಜಕರ ವಿವರಗಳನ್ನು ಮುಂಚಿತವಾಗಿ ಆಯಾ ತಹಸೀಲ್ದಾರರಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿ ಸದರಿ ಅಧಿಕಾರಿಗಳು ನಿಗಧಿಪಡಿಸುವ ಮಾರ್ಗ, ಸ್ಥಳ, ಸಮಯದ ಬಗ್ಗೆ ಸೂಕ್ತ ಅನುಮತಿ ಪಡೆಯಬೇಕು. ಅನುಮತಿ ಇಲ್ಲದೆ ಕಾರ್ಯಕ್ರಮ ನಡೆಸುವುದನ್ನು ನಿಷೇಧಿಸಿದೆ.
ಯಾವುದೇ ರೀತಿಯ ಮಾರಕಾಸ್ತ್ರ, ಶಸ್ತ್ರಾಸ್ತ್ರ, ಆಯುಧಗಳನ್ನು ದೈಹಿಕವಾಗಿ ಹಿಂಸೆಯನ್ನುಂಟು ಮಾಡುವ ಯಾವುದೇ ಸಲಕರಣೆಗಳನ್ನು ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಸ್ಪೋಟಕ/ಸಿಡಿಮದ್ದುಗಳ ಸಾಗಾಣಿಕೆ-ದಾಸ್ತಾನು ಹಾಗೂ ಬಳಕೆಯನ್ನು ಖಾಸಗಿ ಅಥವಾ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಹಾನಿಗೊಳಿಸುವುದು, ಬಂದ್, ಪ್ರತಿಭಟನೆ, ಮುಷ್ಕರ,ಪ್ರತಿಕೃತಿ ದಹನ, ಪ್ರದರ್ಶನ ಹಾಗೂ ಪೂರಕ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಕಾರ್ಯಕ್ರಮದ ಅವಧಿಯಲ್ಲಿ ಇತರೆ ಸಾರ್ವಜನಿಕರಿಗೆ, ಜನಸಾಮಾನ್ಯರಿಗೆ ಅವರುಗಳ ದೈನಂದಿನ ಚಟುವಟಿಕೆ ಹಾಗೂ ವ್ಯವಹಾರಗಳಿಗೆ, ಸಂಚಾರ ಮತ್ತು ಸಂಪರ್ಕಗಳಿಗೆ ಧಕ್ಕೆಯಾಗದಂತೆ ಕ್ರಮ ವಹಿಸುವುದು ಆಯಾ ಸಂಘಟಕರ ಜವಾಬ್ದಾರಿಯಾಗಿರುತ್ತದೆ.
ಕಾರ್ಯಕ್ರಮದ ಯಾವುದೇ ಸಂದರ್ಭದಲ್ಲಿ ಯಾವುದೇ ವ್ಯಕ್ತಿಯ ಧರ್ಮ, ಕೋಮು, ಜಾತಿ, ಪಂಥ ಮತ್ತಿತರ ಸಂಘಟನೆಗಳ ವಿರುದ್ಧ ಅಥವಾ ನಿಂದಿಸುವಂತಹ ಘೋಷಣೆ, ಅವಾಚ್ಯ ಶಬ್ದಗಳ ಬಳಕೆ, ನಿಂದನೆ, ವೇದಿಕೆ ನಿರ್ಮಾಣ, ಭಾಷಣ, ಮದ್ಯಪಾನ ಬಳಕೆ, ಬ್ಯಾನರ್-ಭಿತ್ತಿಪತ್ರಗಳ ಪ್ರದರ್ಶನ ವಿರೂಪಗೊಳಿಸುವ ಮತ್ತು ನಿಂದನಾರ್ಹ ಚಟುವಟಿಕೆಗಳನ್ನು ನಿಷೇಧಿಸಿದೆ.