ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗದಲ್ಲಿರುವ ದೇವಿರಮ್ಮ ದೇವಸ್ಥಾನ ವರ್ಷಕ್ಕೊಮ್ಮೆ ಅದರಲ್ಲೂ ದೀಪಾವಳಿ ಹಬ್ಬದ ನರಕ ಚತುರ್ದಶಿಯಂದು ಮಾತ್ರ ಭಕ್ತರ ದರ್ಶನಕ್ಕಾಗಿ ತೆರೆಯುತ್ತದೆ. ಹೀಗಾಗಿ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ದರ್ಶನ ಪಡೆಯುತ್ತಾರೆ. ದೇವಿರಮ್ಮ ಬೆಟ್ಟಕ್ಕೆ ಬುಧವಾರ ಮಧ್ಯರಾತ್ರಿಯಿಂದಲೇ ಭಕ್ತರು ಆಗಮಿಸುತ್ತಿದ್ದಾರೆ. ವರ್ಷಕ್ಕೊಮ್ಮೆ ದರ್ಶನವನ್ನು ನೀಡುವ ದೇವಿರಮ್ಮ ತಾಯಿಯನ್ನು ಕಣ್ತುಂಬಿಕೊಳ್ಳಲು ಬೆಟ್ಟವನ್ನೇರಲು ಭಕ್ತರು ಬರುತ್ತಿದ್ದಾರೆ. ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿರಮ್ಮ ತಾಯಿಯನ್ನ ನೋಡಲು ಈ ವರ್ಷ ನಿರೀಕ್ಷೆಗೂ ಮೀರಿದ ಭಕ್ತರು ಆಗಮಿಸುತ್ತಿದ್ದಾರೆ. ಪ್ರತಿ ವರ್ಷ 50 ಸಾವಿರಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತುತ್ತಿದ್ದರು. ಆದರೆ, ಈ ವರ್ಷ ಬುಧವಾರ ಸಂಜೆಯಿಂದ ಈವರೆಗೆ ಬೆಟ್ಟ ಹತ್ತಿದ ಭಕ್ತರ ಸಂಖ್ಯೆ ಲಕ್ಷದ ಗಡಿ ದಾಟಿದೆ.
ಸುಮಾರು 3800 ಅಡಿ ಎತ್ತದಲ್ಲಿರೋ ದೇವಿರಮ್ಮನ ಬೆಟ್ಟದಲ್ಲಿ ವರ್ಷಕ್ಕೊಮ್ಮೆ ಮಾತ್ರ ಪೂಜೆ ನಡೆಯುತ್ತದೆ. ವ್ರತದ ಮೂಲಕ ಹರಕೆ ಕಟ್ಟಿ ಉಪವಾಸವಿದ್ದವರು ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರ ಊಟ ಮಾಡುತ್ತಾರೆ. ಭಕ್ತರು ತಂದ ಸೌದೆ, ಎಣ್ಣೆ, ಬೆಣ್ಣೆ, ಸೀರೆ, ರವಕೆಗಳಿಗೆ ಅಗ್ನಿ ಸ್ಪರ್ಶ ಮಾಡಿದ ಬಳಿಕ, ಚಿಕ್ಕಮಗಳೂರಿನ ಸುತ್ತಮುತ್ತಲಿನ ಜನ ಆ ಜ್ಯೋತಿಯನ್ನು ನೋಡಿದ ಆರತಿ ಮಾಡಿ ನಂತರ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.