ಚಿಕ್ಕಮಗಳೂರು : ಮುಂದಿನ ಪೀಳಿಗೆ ಸುಖ ಮತ್ತು ನೆಮ್ಮದಿಯಿಂದ ಬದುಕ ಬೇಕಾದರೆ ನಾವು ಈಗಲೇ ಗಿಡಮರಗಳನ್ನು ನೆಟ್ಟು ಕಾಡನ್ನು ಬೆಳೆಸುವುದರ ಜೊತೆಗೆ ನಮ್ಮ ಪರಿಸರವನ್ನೂ ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ಸಿಪಿಐ ಮುಖಂಡ ಬಿ.ಅಮ್ಜದ್ ಅವರು ಸಲಹೆ ಮಾಡಿದರು.
ನಗರದ ಐ.ಜಿ.ರಸ್ತೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಇಕೋ ಕ್ಲಬ್ ಉದ್ಘಾಟಿಸಿ ಅವರು ಮಾತನಾಡಿದರು.
ನಮಗೆ ಬದುಕಲು ಇರುವುದು ಒಂದೇ ಭೂಮಿ, 700 ಕೋಟಿಗೂ ಹೆಚ್ಚು ಜನ ಅದರಲ್ಲಿ ಬದುಕುತ್ತಿದ್ದೇವೆ. ನಾವು ಸುಖ ಮತ್ತು ನೆಮ್ಮದಿಯಿಂದ ಬದುಕುತ್ತಿರುವುದಕ್ಕೆ ಮೂಲ ಕಾರಣ ಉತ್ತಮ ಪರಿಸರ, ಹಾಗಾಗಿ ಅದನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ನಮ್ಮ ಹಿರಿಯರು ಪ್ರಕೃತಿಯನ್ನು ದೇವರೆಂದು ಪೂಜಿಸುತ್ತಿದ್ದರು, ಗಿಡ ಮರಗಳನ್ನು ನೆಟ್ಟು ಕಾಡುಗಳನ್ನು ಬೆಳೆಸಿದ್ದರು, ಅದರಿಂದಾಗಿ ಆಗ ಸಕಾಲಕ್ಕೆ ಮಳೆ, ಬೆಳೆಯಾಗಿ ಭೂಮಿ ಸಮೃದ್ದವಾಗಿತ್ತು, ಎಲ್ಲರೂ ಸುಖದಿಂದ ಬದುಕುತ್ತಿದ್ದರು ಎಂದರು.
ಆದರೆ ಈಗ ನಮ್ಮ ದುರಾಸೆ ಮತ್ತು ಸ್ವಾರ್ಥದಿಂದಾಗಿ ಕಾಡನ್ನು ಕಡಿದು ಪರಿಸರವನ್ನು ನಾಶಗೊಳಿಸಿರುವುದರಿಂದಾಗಿ ಅತಿವೃಷ್ಠಿ, ಅನಾವೃಷ್ಠಿ, ಪ್ರಕೃತಿ ವಿಕೋಪ ಸಂಭವಿಸುತ್ತಿದೆ, ಭೂಮಿಯಲ್ಲಿ ಅಂತರ್ಜಲ ಬತ್ತುತ್ತಿದೆ, ಕಂಡು ಕೇಳರಿಯದ ರೋಗರುಜಿನಗಳು ನಮ್ಮನ್ನು ಕಾಡುತ್ತಿವೆ, ಉಸಿರಾಡುವ ಗಾಳಿಯನ್ನು ಹಣ ಕೊಟ್ಟು ಕೊಂಡು ಕೊಳ್ಳುವಂತಾಗಿದೆ ಎಂದು ವಿಷಾದಿಸಿದರು.
ಶಾಲಾಭಿವೃದ್ದಿ ಸಮಿತಿಯ ಗೌರವಾಧ್ಯಕ್ಷ ನಸ್ರುಲ್ಲಾ ಷರೀಫ್ ಅವರು ಮಾತನಾಡಿ ನಾವು ಈಗಿನಿಂದಲೇ ಗಿಡ ಮರ ಮತ್ತು ಕಾಡನ್ನು ಬೆಳೆಸಿ ಪರಿಸರವನ್ನು ಸ್ವಚ್ಚವಾಗಿಟ್ಟು ಕೊಂಡರೆ ಮಾತ್ರ ಮುಂದಿನ ಪೀಳಿಗೆಯ ಬದುಕು ಸುಖಮಯವಾಗುತ್ತದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಮಹೇಶಪ್ಪ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಪ್ರೀತಿ, ಕಾಳಜಿ ಮತ್ತು ಜಾಗೃತಿಯನ್ನು ಬೆಳೆಸುವ ಉದ್ದೇಶದಿಂದ ಶಾಲೆಯಲ್ಲಿ ಇಕೋ ಕ್ಲಬ್ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷೆ ಜೀನತ್ ಉನ್ನೀಸ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಶಿಕ್ಷಕಿ ಫರ್ಜಾನ ಬೇಗಂ, ನಿವೃತ್ತ ಮುಖ್ಯ ಶಿಕ್ಷಕಿ ಶಹಜಾದಿ ಬೀ, ಬೈತುಲ್ ಮಲ್ ಸಂಸ್ಥೆಯ ಕಾರ್ಯದರ್ಶಿ ಮುಸ್ತಾಕ್ ಅಹಮದ್, ಸದಸ್ಯ ಶಬ್ಬೀರ್ ಅಹಮದ್, ಮುನಾವರ್, ಶಿಕ್ಷಕರಾದ ತಂಜೀಂ, ಕಾವ್ಯ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ನಾವು ಸುಖ ಮತ್ತು ನೆಮ್ಮದಿಯಿಂದ ಬದುಕುತ್ತಿರುವುದಕ್ಕೆ ಮೂಲ ಕಾರಣ ಉತ್ತಮ ಪರಿಸರ-ಬಿ.ಅಮ್ಜದ್.










