ಚಿಕ್ಕಮಗಳೂರು : ನೀರಿಲ್ಲದೇ ಜಗತ್ತಿಲ್ಲ, ಜಗತ್ತು ಇರುವುದೇ ನೀರಿನಿಂದ : ಎ.ಎನ್.ಮಹೇಶ್.

181
Firstsuddi

ಚಿಕ್ಕಮಗಳೂರು : ಮುಂದಿನ ತಲೆಮಾರು ನೆಮ್ಮದಿಯಿಂದ ಬದುಕಬೇಕಾದರೆ ನಾವು ಈಗಿನಿಂದಲೇ ಅರಣ್ಯಗಳನ್ನು ಬೆಳೆಸುವುದರ ಜೊತೆಗೆ ಜಲಮೂಲಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂದು ಅರಣ್ಯ ಮತ್ತು ವಸತಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.

ನಗರದ ಎಂಇಎಸ್ ಕಾಲೇಜಿನಲ್ಲಿ ಮಲೆನಾಡು ವಿದ್ಯಾಸಂಸ್ಥೆ ಮತ್ತು ಚಿಕ್ಕಮಗಳೂರು ವಿಷನ್ ಟ್ರಸ್ಟ್ ಸೋಮವಾರ ಏರ್ಪಡಿಸಿದ್ದ ವಿಶ್ವಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನೀರಿಲ್ಲದೇ ಜಗತ್ತಿಲ್ಲ. ಜಗತ್ತು ಇರುವುದೇ ನೀರಿನಿಂದ. ವಿಶ್ವದಲ್ಲಿ 800 ಕೋಟಿ ಜನಸಂಖ್ಯೆ ಇದೆ ಅದರಲ್ಲಿ 200 ಕೋಟಿಯಷ್ಟು ಜನರಿಗೆ ಕುಡಿಯಲು ನೀರೇ ಇಲ್ಲ. ವಿಜ್ಞಾನ ಬೆಳೆದಂತೆ ಮಂಗಳನ ಅಂಗಳಕ್ಕೆ ಮತ್ತು ಚಂದ್ರನ ಅಂಗಳಕ್ಕೆ ಕಾಲಿಟ್ಟಿರುವ ವಿಜ್ಞಾನಿಗಳಿಗೆ ನೀರನ್ನು ಕಂಡು ಹಿಡಿಯಲಾಗಿಲ್ಲ, ಹಾಗಾಗಿ ನಾವು ಅದನ್ನು ಮುತುವರ್ಜಿಯಿಂದ ಸಂರಕ್ಷಿಸಬೇಕಾಗಿದೆ ಎಂದರು.

ಆಧುನಿಕತೆ ಬೆಳೆದು ನಗರೀಕರಣವಾಗುತ್ತಿದ್ದಂತೆ ನಮ್ಮಲಿದ್ದ ಕೆರೆ ಕಟ್ಟೆಗಳು ಮಾಯವಾಗಿವೆ. ನಮ್ಮ ಪರಂಪರೆ ಮತ್ತು ಸಂಸ್ಕøತಿಯಲ್ಲಿ ನೀರಿಗೆ ದೇವರ ಸ್ಥಾನ ನೀಡಿದ್ದೇವೆ. ಆದರೆ ಅದನ್ನು ರಕ್ಷಿಸುವ ಕೆಲಸ ಮಾಡುತ್ತಿಲ್ಲ ಎಂದು ವಿಷಾದಿಸಿದರು.

ಕೆರೆ ಕಟ್ಟೆಗಳನ್ನು ಕಟ್ಟುವ ಮೂಲಕ ನಮ್ಮ ಹಿರಿಯರು ನೂರಾರು ವರ್ಷಗಳಿಂದ ನೀರನ್ನು ಉಳಿಸಿಕೊಂಡು ಬಂದಿದ್ದಾರೆ. ಅದನ್ನು ನಾವು ಮುಂದುವರಿಸುವ ಮೂಲಕ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು. ಸರ್ಕಾರಗಳ ಕಡೆಗೆ ಬೆರಳು ತೋರುವುದನ್ನು ಬಿಟ್ಟು ಜಲಮೂಲಗಳನ್ನು ಸಂರಕ್ಷಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಲೆನಾಡು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯ್‍ಕುಮಾರ್ ಮನುಷ್ಯನಿಗೆ ಬದುಕಲು ಅಗತ್ಯವಿರುವುದು ನೀರು ಅದಿಲ್ಲದಿದ್ದರೆ ಮಾನವನ ಬದುಕೇ ಇಲ್ಲ ಎಂದರು.

ಅಭಿವೃದ್ದಿಯ ಹೆಸರಿನಲ್ಲಿ ಕೆರೆ ಕಟ್ಟೆಗಳನ್ನು ನುಂಗಿದ ಪರಿಣಾಮ ಇಂದು ನಗರ ಪ್ರದೇಶಗಳಲ್ಲಿ ಕುಡಿಯಲು ನೀರಿಲ್ಲದಂತಾಗಿದೆ. ಮಂಗಳ ಗ್ರಹಕ್ಕೆ ಹೋಗಿ ವಿಜ್ಞಾನಿಗಳು ಮನುಷ್ಯರು ಬದುಕಲು ನೀರಿದೆಯೇ ಎಂದು ಹುಡುಕುತ್ತಿದ್ದಾರೆ ಎಂದು ಹೇಳಿದರು.

ಪ್ರಪಂಚದಲ್ಲೇ ಅತಿ ದೊಡ್ಡದಾದ ಅಮೇಜಾನ್ ಕಾಡೂ ಸಹ ನಮ್ಮ ದುರಾಸೆಯಿಂದಾಗಿ ಕಡಿಮೆಯಾಗುತ್ತಿದೆ. ಕುಡಿಯಲು ನೀರಿಲ್ಲದೆ ಬಳಸಿದ ನೀರನ್ನೇ ರೀಸೈಕಲಿಂಗ್ ಮಾಡುವ ಮೂಲಕ ಮರುಬಳಕೆ ಮಾಡಲಾಗುತ್ತಿದೆ ಎಂದ ಅವರು ಇದನ್ನು ಎಲ್ಲರೂ ಅರಿಯಬೇಕು. ಈಗಲಾದರೂ ಎಚ್ಚೆತ್ತು ಜಲವನ್ನು ಸಂರಕ್ಷಿಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಮಲೆನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು, ಖಜಾಂಚಿ ಡಿ.ಹೆಚ್.ನಟರಾಜ್, ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಕೆ.ಎನ್.ಮಂಜುನಾಥ ಭಟ್, ಉಪನ್ಯಾಸಕ ಹೆಚ್.ಕೆ.ಸುಭಾಷ್, ವಿಷನ್ ಚಿಕ್ಕಮಗಳೂರು ಟ್ರಸ್ಟ್‍ನ ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಪ್ರಕಾಶ್ ಉಪಸ್ಥಿತರಿದ್ದರು.