ಚಿಕ್ಕಮಗಳೂರು: ತರೀಕೆರೆ ತಾಲೂಕು ಲಕ್ಕವಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಕ್ರಮವಾಗಿ ನಡೆಸಲಾಗಿರುವ ಅಧ್ಯಕ್ಷರ ಚುನಾವಣೆಯನ್ನು ಕೂಡಲೇ ರದ್ದು ಪಡಿಸುವಂತೆ ಸಂಘದ ನಿರ್ದೇಶಕಿ ಬಿ.ಓ.ಚಂದ್ರಕಲಾ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೆದಾರ್ ಎ.ಎನ್.ಮನು ಅವರನ್ನು ಬೆಂಬಲಿಗರೊಂದಿಗೆ ಇಂದು ಭೇಟಿ ಮಾಡಿದ ಅವರು ಈ ಸಂಬಂಧ ಮನವಿ ಸಲ್ಲಿಸಿದರು.
ನಿರ್ದೇಶಕರ ಚುನಾವಣೆಯ ನಂತರ ಆದ ಕರಾರಿನಂತೆ ಮೊದಲನೇ ಅವಧಿಗೆ ಶಿವಯೋಗಿಯವರು ಅಧ್ಯಕ್ಷರಾಗಿದ್ದು 14 ತಿಂಗಳ ನಂತರ ಎರಡನೇ ಅವಧಿಗೂ ಅವರೇ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ ಎಂದರು.
ಕರಾರಿನಂತೆ ಇದೀಗ ಮೂರನೇ ಅವಧಿಗೆ ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಬೇಕಿತ್ತು. ಆದರೆ, ತಮ್ಮ ಗಮನಕ್ಕೆ ತಾರದೇ ಏಕಾಏಕಿ ಅಕ್ರಮವಾಗಿ ಕಾನೂನು ಬಾಹಿರವಾಗಿ ಚುನಾವಣೆಯನ್ನು ನಡೆಸಿ ಕೆ.ಎಸ್.ರಮೇಶ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಕಾನೂನುಬಾಹಿರ ಅಕ್ರಮ ಚುನಾವಣೆಯಿಂದಾಗಿ ತಮಗೆ ಅನ್ಯಾಯವಾಗಿದ್ದು ಹಾಗಾಗಿ ಚುನಾವಣೆಯನ್ನು ತಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಕರುನಾಡು ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಸ್.ಪಿ.ಶಿವಮೂರ್ತಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷ ಹೆಚ್.ಬಿ.ಸುನಿತಾ, ಪ್ರಧಾನ ಕಾರ್ಯದರ್ಶಿ ಸಿ.ಮೂರ್ತಿ,ಜೆಡಿಯುರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಹಾಜರಿದ್ದರು.










