ಚಿಕ್ಕಮಗಳೂರು: ಪ.ಜಾತಿ ಪ.ವರ್ಗದವರಿಗೆ ಹಂಗಾಮಿಯಾಗಿ ನೀಡಿರುವ ಭೂಮಿಯನ್ನು ಖಾಯಂ ಮಂಜೂರು ಮಾಡುವಂತೆ ಒತ್ತಾಯ…

100
firstsuddi

ಚಿಕ್ಕಮಗಳೂರು:- ತಾಲೂಕಿನ ಕರಡಿ ಹಳ್ಳಿ ಕಾವಲು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೆ ಹಂಗಾಮಿಯಾಗಿ ನೀಡಿರುವ ಭೂಮಿಯನ್ನು ಖಾಯಂ ಮಂಜೂರು ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಗ್ರಾಮದ ಪರಿಶಿಷ್ಟರೊಂದಿಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರನ್ನು ನಿನ್ನೆ ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.

ತಾಲೂಕಿನ ಕರಡಿ ಹಳ್ಳಿ ಕಾವಲು ಗ್ರಾಮದ ಸರ್ವೇ ನಂಬರ್ ಒಂದರಲ್ಲಿ ಕೆಂಪನಹಳ್ಳಿಯ 38 ಪರಿಶಿಷ್ಟರಿಗೆ ಖುಷ್ಕಿ ಸಾಗುವಳಿಗಾಗಿ ತಲಾ 3 ಎಕರೆಯಂತೆ 1960 ರಲ್ಲಿ ಭೂಮಿಯನ್ನು ಹಂಗಾಮಿಯಾಗಿ ಮಂಜೂರು ಮಾಡಲಾಗಿತ್ತು ಎಂದು ಹೇಳಿದರು.

ಆ ಭೂಮಿಗೆ ಹಂಗಾಮಿಯಾಗಿ ಸಾಗುವಳಿ ಚೀಟಿ ಸೇರಿದಂತೆ ದಾಖಲೆಗಳನ್ನು ನೀಡಲಾಗಿದೆ. ಹಾಗಾಗಿ ಅಲ್ಲಿನ ಪರಿಶಿಷ್ಟ ಕುಟುಂಬದವರು ಆ ಭೂಮಿಯಿಂದ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ತಿಳಿಸಿದರು.

ನಂತರದ ದಿನಗಳಲ್ಲಿ ಆ ಭೂಮಿಯನ್ನು ಆತಿವ್ಯಾಪ್ತಿ ಮಾಡಿ ಅಧಿಕಾರಿಗಳು ಬೇರೆಯವರಿಗೆ ಮಂಜೂರು ಮಾಡಿದ್ದು ನಂತರ ಸ್ಥಳ ಪರಿಶೀಲನೆ ವೇಳೆ ಭೌತಿಕವಾಗಿ ಭೂಮಿ ಲಭ್ಯವಿಲ್ಲದ ಕಾರಣ ಆ ಮಂಜೂರಾತಿಯನ್ನು ರದ್ದುಪಡಿಸಲಾಗಿದೆ ಎಂದರು.

ಇದರಿಂದ ಹೊಸದಾಗಿ ಮಂಜೂರು ಮಾಡಿಸಿಕೊಂಡವರು ನ್ಯಾಯಾಲಯದ ಮೆಟ್ಟಿಲೇರಿದ್ದು, ವಿಚಾರಣೆ ನಡೆಸಿದ ರಾಜ್ಯ ಉಚ್ಚ ನ್ಯಾಯಾಲಯ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಈಗಲಾದರೂ ಕೂಲಂಕುಶವಾಗಿ ಪರಿಶೀಲನೆ ನಡೆಸಿ ಪರಿಶಿಷ್ಟರಿಗೆ ಭೂಮಿಯನ್ನು ಖಾಯಂ ಮಂಜೂರು ಮಾಡಿಕೊಡುವಂತೆ ಆಗ್ರಹಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಕೆ ಸಿ ವಸಂತಕುಮಾರ್, ಮುಖಂಡರಾದ ಎಂ ಸಿ ಜಯರಾಮಯ್ಯ, ವಿ ಧರ್ಮೇಶ್, ಯಶೋಧರ, ಸಂತ್ರಸ್ತರಾದ ದೊಡ್ಡಯ್ಯ, ಜವರಯ್ಯ, ಶಾಂತಮ್ಮ, ಕೆಎಸ್ ಈಶ್ವರ ನಾಗರಾಜ್, ಪುಟ್ಟಲಕ್ಷ್ಮಿ, ಲಲಿತಮ್ಮ, ಭದ್ರಯ್ಯ, ಅಂಬಿಕಾ ಹಾಜರಿದ್ದರು.