ಚಿಕ್ಕಮಗಳೂರು : ಭಾರತ ಸೇವಾದಳದ ಸಂಸ್ಥಾಪಕ ನಾ.ಸು.ಹರ್ಡಿಕರ್ ಅವರ ನಿಸ್ವಾರ್ಥ ಸೇವೆ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆ ಮೈಗೂಡಿಸಿಕೊಳ್ಳಬೇಕು : ಕುಂದೂರು ಅಶೋಕ್.

235
firstsuddi

ಚಿಕ್ಕಮಗಳೂರು : ಭಾರತ ಸೇವಾದಳದ ಸಂಸ್ಥಾಪಕ ನಾ.ಸು.ಹರ್ಡಿಕರ್ ಅವರ ನಿಸ್ವಾರ್ಥ ಸೇವೆ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಸಲಹೆ ಮಾಡಿದರು.
ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಜ್ಞಾನಜ್ಯೋತಿ ಘಟಕ ಏರ್ಪಡಿಸಿದ್ದ ಭಾರತ ಸೇವಾದಳದ ಸಂಸ್ಥಾಪಕ ನಾ.ಸು.ಹರ್ಡಿಕರ್ ಅವರ 131ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೇವೆ ಇಂದು ಪ್ರಚಾರದ ಸರಕಾಗಿದೆ, ಪ್ರಚಾರಕ್ಕಾಗಿ ಮಾತ್ರ ಸೇವೆ ಮಾಡುವುದು ಕಂಡು ಬರುತ್ತಿದೆ ಎಂದು ವಿಷಾದಿಸಿದ ಅವರು ಈ ಪ್ರವೃತ್ತಿ ನಿಲ್ಲಬೇಕು, ನಾ.ಸು.ಹರ್ಡಿಕರ್ ಅವರಂತೆ ನಿಸ್ವಾರ್ಥ ಸೇವೆಗೆ ಎಲ್ಲರೂ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಅಮೇರಿಕಾದಲ್ಲಿ ಉನ್ನತ ವ್ಯಾಸಂಗ ಮಾಡಿದ ಹರ್ಡಿಕರ್ ಅವರು ಅಲ್ಲೇ ಐಷಾರಾಮಿಯಾಗಿ ಬದುಕಬಹುದಿತ್ತು ಆದರೆ ಸ್ವದೇಶಕ್ಕೆ ಮರಳಿ ತಾಯ್ನಾಡಿನ ಮುಕ್ತಿಗಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು ಮದುವೆಯಾಗದೆ ಬ್ರಹ್ಮಚಾರಿಯಾಗೇ ಉಳಿದು ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ಸಮರ್ಪಿಸಿದರು ಎಂದರು.
ಭಾರತ ಸೇವಾದಳವನ್ನು ಸ್ಥಾಪಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು, ದೇಶಭಕ್ತರನ್ನು ಸೃಷ್ಠಿಸಿದರು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಮಾತನಾಡಿ ಹರ್ಡಿಕರ್ ಅವರ ಸೇವೆಗಾಗಿ ಬಾಳು ಸಂದೇಶವನ್ನು ಎಲ್ಲರೂ ಪಾಲಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳದ ತಾಲ್ಲೂಕು ಸಂಘಟಕ ಎಸ್.ಈ.ಲೋಕೇಶ್ವರಾಚಾರ್ ಲಾಕ್‍ಡೌನ್ ನಿರ್ಬಂದದ ಹಿನ್ನೆಲೆಯಲ್ಲಿ ಈ ಬಾರಿ ಜನ್ಮ ದಿನವನ್ನು ಸರಳವಾಗಿ ಅಚರಿಸಲಾಗುತ್ತಿದೆ ಎಂದು ತಿಳಿಸಿದರು.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಸೇವಾದಳದ ಪದಾಧಿಕಾರಿಗಳೂ ಮಾತ್ರ ಪಾಲ್ಗೊಂಡು ಕಾರ್ಯಕ್ರಮವನ್ನು ಸರಳವಾಗಿ ಆಚರಿಸಿದರು, ಹರ್ಡಿಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು, ಇತ್ತೀಚೆಗೆ ನಿಧನರಾದ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಮತ್ತು ಉಗ್ರರೊಂದಿಗೆ ಕಾದಾಡುವ ವೇಳೆ ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.
ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ ಅಧ್ಯಕ್ಷತೆ ವಹಿಸಿದ್ದರು, ಸೇವಾದಳದ ತಾಲ್ಲೂಕು ಅಧ್ಯಕ್ಷ ಬಿ.ಆರ್.ಜಗದೀಶ್, ಜಿಲ್ಲಾ ಕಾರ್ಯದರ್ಶಿ ಹಂಪಯ್ಯ, ಮಧು ಉಪಸ್ಥಿತರಿದ್ದರು