ಚಿಕ್ಕಮಗಳೂರು : ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವುದು ಹೆತ್ತವರ ಆದ್ಯ ಕರ್ತವ್ಯ ಎಂದು ಬೆಲಗೂರು ಶ್ರೀ ವೀರಪ್ರತಾಪ ಆಂಜನೇಯಸ್ವಾಮಿ ಕ್ಷೇತ್ರದ ಶ್ರೀ ಬಿಂದುಮಾಧವ ಶರ್ಮ ಸ್ವಾಮೀಜಿ ಹೇಳಿದರು.
ವಾಗ್ದೇವಿ ವಿಲಾಸ ಶಿಕ್ಷಣ ಸಮೂಹ ಸಂಸ್ಥೆ ಬೀರೂರಿನ ಹೊರವಲಯದಲ್ಲಿ ನಿರ್ಮಿಸಿರುವ ವಾಗ್ದೇವಿ ವಿಲಾಸ ಶಾಲೆಯನ್ನು ಬುಧವಾರ ಉದ್ಘಾಟಿಸಿ ನಂತರ ನಡೆದ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಹೆತ್ತವರು ಮಕ್ಕಳನ್ನು ಶಾಲೆಗೆ ಸೇರಿಸಿ ತಮ್ಮ ಕೆಲಸ ಮುಗಿಯಿತೆಂದು ಸುಮ್ಮನಾಗಬಾರದು ಸದಾಕಾಲ ಅವರನ್ನು ಹಿಂಭಾಲಿಸಿ ಅವರ ಕಾರ್ಯಚಟುವಟಿಕೆಗಳನ್ನು ಗಮನಿಸುತ್ತಿರಬೇಕು ಅವರನ್ನು ಎಳೆಯ ವಯಸ್ಸಿನಲ್ಲೇ ತಿದ್ದಿತೀಡಿ ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ ದೇಶವನ್ನು ಮುನ್ನಡೆಸುವವರು ಜನಪ್ರತಿನಿಧಿಗಳು ಹಾಗಾಗಿ ಪೋಷಕರು ತಮ್ಮ ಮಕ್ಕಳು ಐಎಎಸ್, ಐಪಿಎಸ್ ಮಾಡಲಿ ಎನ್ನದೇ ಅವರನ್ನು ಉತ್ತಮ ರಾಜಕಾರಣಿಗಳನ್ನಾಗಿ ಬೆಳೆಸಬೇಕು ಎಂದು ಸಲಹೆ ಮಾಡಿದರು.
ವಿಧಾನಪರಿಷತ್ ಮಾಜಿ ಸದಸ್ಯ ಭಾನುಪ್ರಕಾಶ್ ಮಾತನಾಡಿ ಪೋಷಕರು ಮಕ್ಕಳನ್ನು ಬರೀ ಪಠ್ಯಪುಸ್ತಕಕ್ಕಷ್ಟೇ ಸೀಮಿತಗೊಳಿಸಬಾರದು, ರಾಮಾಯಣ, ಮಹಾಭಾರತ ಮತ್ತು ಸಾಧು ಸಂತರ ಕಥೆಗಳನ್ನು ಅವರಿಗೆ ಹೇಳಬೇಕು ಅವರಲ್ಲಿ ಬುದ್ದಿ ಮತ್ತು ವಿವೇಕವನ್ನು ಬೆಳೆಸಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಾಗ್ದೇವಿ ವಿಲಾಸ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಹರೀಶ್ ತಮಗೆ ಬೀರೂರಿನಲ್ಲಿ ಶಾಲೆಯನ್ನು ಆರಂಭಿಸುವ ಕಲ್ಪನೆ ಅಥವಾ ಕನಸಿರಲಿಲ್ಲ ಬೆಲಗೂರಿನ ಗುರುಗಳು ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಬೀರೂರಿನಲ್ಲಿ ಶಾಲೆ ಆರಂಭಿಸುವಂತೆ ಸೂಚಿಸುವುದರ ಜೊತೆಗೆ 5 ಎಕರೆ ಭೂಮಿಯನ್ನೂ ನೀಡಿದ ಹಿನ್ನೆಲೆಯಲ್ಲಿ ಸಂಸ್ಥೆಯನ್ನು ಇಲ್ಲಿ ಆರಂಭಿಸಿದ್ದೇವೆ ಎಂದು ತಿಳಿಸಿದರು.
ಸಂಸ್ಥೆಯ ವತಿಯಿಂದ ಶ್ರೀ ಬಿಂದುಮಾಧವ ಶರ್ಮ ಸ್ವಾಮೀಜಿಯವರಿಗೆ ಸಮಾರಂಭದಲ್ಲಿ ಪಾದಪೂಜೆ ನೆರವೇರಿಸಲಾಯಿತು, ಶಾಲೆಯ ನಿರ್ಮಾಣಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.
ಇದೇ ವೇಳೆ ಒರಿಸ್ಸಾದ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಶಾಲೆಯ ಆವರಣದಲ್ಲಿ ನಿರ್ಮಿಸಿರುವ ಶ್ರೀ ಬಿಂದುಮಾಧವ ಶರ್ಮ ಸ್ವಾಮೀಜಿಯವರ ಮರಳು ಶಿಲ್ಪ ಸಾರ್ವಜನಿಕರ ಗಮನ ಸೆಳೆಯಿತು.

ಸಂಸ್ಥೆಯ ಆಡಳಿತಾಧಿಕಾರಿಗಳಾದ ವಿನಯ್ ಭಟ್, ಶ್ರೀಧರಯ್ಯ, ಟ್ರಸ್ಟಿ ಗಣೇಶ್, ಬೆಲಗೂರು ಕ್ಷೇತ್ರದ ಮುಖ್ಯಸ್ಥ ಗುರುದತ್ತ ಸುಂದರಮ್ಮ ಕೃಷ್ಣಮೂರ್ತಿ ಉಪಸ್ಥಿತರಿದ್ದರು.










