ಚಿಕ್ಕಮಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪದಚ್ಯುತಿ ಹುನ್ನಾರವನ್ನು ಕೈಬಿಡುವಂತೆ ಆಗ್ರಹಿಸಿ ಪ್ರತಿಭಟನೆ…

97
firstsuddi

ಚಿಕ್ಕಮಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪದಚ್ಯುತಿ ಹುನ್ನಾರವನ್ನು ಕೈಬಿಡುವಂತೆ ಆಗ್ರಹಿಸಿ ವೀರಶೈವ ಲಿಂಗಾಯಿತ ಸಮಾಜದ ವಿವಿಧ ಸಂಘಟನೆಗಳು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದವು.

ಬೆಳಿಗ್ಗೆ ಆಜಾದ್‍ಪಾರ್ಕ್ ವೃತ್ತದ ಬಳಿ ಜಮಾಯಿಸಿದ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪದಚ್ಯುತಿಗೆ ಮುಂದಾಗಿರುವ ಕ್ರಮದ ವಿರುದ್ಧ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ವಿರಶೈವ ಲಿಂಗಾಯಿತ ಸಮಾಜದ ತಾಲ್ಲೂಕು ಅಧ್ಯಕ್ಷ ಬಿ.ಎ.ಶಿವಶಂಕರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಮುಂದಾಗಿರುವ ಕ್ರಮದ ಹಿಂದೆ ದೊಡ್ಡ ಪಿತೂರಿ ಮತ್ತು ಷಡ್ಯಂತ್ರವಿದ್ದು ಅದನ್ನು ಇಡೀ ವೀರಶೈವ ಲಿಂಗಾಯಿತ ಸಮುದಾಯ ಬಲವಾಗಿ ವಿರೋಧಿಸುತ್ತದೆ ಎಂದರು.

ಬಿ.ಎಸ್.ಯಡಿಯೂರಪ್ಪ ಅವರನ್ನು ವೀರಶೈವ ಸಮಾಜದ ನಾಯಕ ಎಂಬ ಒಂದೇ ಕಾರಣದಿಂದ ಪದಚ್ಯುತಿಗೊಳಿಸಲು ಹುನ್ನಾರ ನಡೆಸಲಾಗಿದೆ. ವೀರಶೈವ ಸಮಾಜದ ನಾಯಕರು ಐದು ವರ್ಷಗಳ ಕಾಲ ಅಧಿಕಾರ ನಡೆಸಲು ರಾಜ್ಯದಲ್ಲಿ ಇದುವರೆಗೆ ಬಿಟ್ಟಿಲ್ಲ ಎಂದು ಆರೋಪಿಸಿದ ಅವರು ಈ ಕ್ರಮ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಮಾಡಿರುವ ದೊಡ್ಡ ಅಪಮಾನ ಎಂದು ಹೇಳಿದರು.

ಬಿ.ಎಸ್.ಯಡಿಯೂರಪ್ಪ ಅವರು ವೀರಶೈವ ಲಿಂಗಾಯಿತ ಸಮುದಾಯದ ಪ್ರಮುಖ ನಾಯಕರು ಅವರಿಂದಾಗಿಯೇ ರಾಜ್ಯದಲ್ಲಿ ಬಿಜೆಪಿ ಉಳಿದಿದೆ. ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ ಎಂದ ಅವರು ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸಬಾರದು ಎಂದು ಇಡೀ ಸಮಾಜ ಹಕ್ಕೋತ್ತಾಯ ಮಾಡುತ್ತದೆ. ಒಂದು ವೇಳೆ ಪದಚ್ಯುತಿಗೊಳಿಸಿದ್ದಲ್ಲಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸುತ್ತದೆ ಎಂದು ಎಚ್ಚರಿಸಿದರು.

ವೀರಶೈವ ಲಿಂಗಾಯಿತ ಸಮಾಜದ ತಾಲ್ಲೂಕು ಉಪಾಧ್ಯಕ್ಷ ಎಂ.ಎಸ್.ನಿರಂಜನ್ ಮಾತನಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊರೊನಾ ಸಂಕಷ್ಟದ ಕಾಲದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದ ಸರ್ವಾಂಗೀಣ ಅಭಿವೃದ್ದಿ ಮಾಡುತ್ತಿದ್ದಾರೆ. ಅವರನ್ನು ಮುಖ್ಯ ಮಂತ್ರಿಯಾಗಿ ಮುಂದುವರೆಸುವುದು ಸೂಕ್ತ ಎಂದು ತಿಳಿಸಿದರು.

ವೀರಶೈವ ಲಿಂಗಾಯಿತ ಸಮಾಜದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದ ಸ್ವಾಮಿ ಮಾತನಾಡಿ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸದಂತೆ ಮಠ ಮಾನ್ಯಗಳು, ಪ್ರಗತಿಪರರು ವಿರೋಧ ಪಕ್ಷದವರೂ ಸಹ ಬಲವಾಗಿ ಒತ್ತಾಯಿಸಿದ್ದರು ಬಿಜೆಪಿ ಹೈಕಮಾಂಡ್ ಆ ಬಗ್ಗೆ ಚಕಾರವೆತ್ತದಿರುವುದು ಹಲವು ಅನುಮಾನಗಳಿಗೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸೋಮಶೇಖರ್, ವೀರಶೈವ ಲಿಂಗಾಯಿತ ಸಮಾಜದ ತಾಲ್ಲೂಕು ಉಪಾಧ್ಯಕ್ಷ ಹೆಚ್.ಎಂ.ರೇಣುಕಾರಾಧ್ಯ, ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಯಮುನಾ ಚನ್ನಬಸಪ್ಪಶೆಟ್ಟಿ, ಕೆ.ವಿ.ಶಿವಕುಮಾರ್ ಸೇರಿದಂತೆ ಮಾತನಾಡಿದ ಬಹುತೇಕ ಮುಖಂಡರು ಯಡಿಯೂರಪ್ಪ ಅವರನ್ನು ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರೆ ಸಲೇ ಬೇಕು ಎಂದು ಆಗ್ರಹಿಸಿದರು.

ವೀರಶೈವ ಲಿಂಗಾಯಿತ ಸಮಾಜದ ತಾಲ್ಲೂಕು ನಿರ್ದೇಶಕ ಮುರುಗೇಂದ್ರ ಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ, ಜಿಲ್ಲಾ ಕಾರ್ಯದರ್ಶಿ ಸಿ.ಬಿ.ನಂದೀಶ್, ಅಜ್ಜಂಪುರ ಅಧ್ಯಕ್ಷ ಸಿದ್ದೇಗೌಡ, ತರೀಕೆರೆ ಅಧ್ಯಕ್ಷ ಗಿರಿರಾಜ್, ಮೂಡಿಗೆರೆ ಅಧ್ಯಕ್ಷ ಓಂಕಾರಸ್ವಾಮಿ, ಮುಖಂಡ ಪೂಣೇಶ್, ವೀರಶೈವ ಸಮಾಜದ ಬಿ.ಪಿ.ಜಗದೀಶ್, ಪಟ್ಟಣ ಸಹಕಾರ ಬ್ಯಾಂಕಿನ ಅಧ್ಯಕ್ಷ ಹೆಚ್.ಎಂ.ನಂಜೇಗೌಡ, ವೀರಶೈವ ಸಹಕಾರ ಸಂಘದ ಅಧ್ಯಕ್ಷ ಓಂಕಾರಸ್ವಾಮಿ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಶ್ ಕ್ಯಾತನಬೀಡು, ಕುಮಾರಸ್ವಾಮಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.