ಚಿಕ್ಕಮಗಳೂರು : ಮುರುಘಾ ಶರಣರನ್ನು ಬಂಧಿಸುವಂತೆ ಬಿಎಸ್‍ಪಿ ಒತ್ತಾಯ…

85
firstsuddi

ಚಿಕ್ಕಮಗಳೂರು : ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಹೊತ್ತಿರುವ ಚಿತ್ರದುರ್ಗ ಬೃಹನ್ಮಠದ ಶ್ರೀ ಮುರುಘಾ ಶರಣರನ್ನು ತಕ್ಷಣ ಬಂಧಿಸುವಂತೆ ಬಹುಜನ ಸಮಾಜಪಕ್ಷ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ಇಂದು ಭೇಟಿ ಮಾಡಿ ಮನವಿ ಸಲ್ಲಿಸಿದ ಪಕ್ಷದ ಪದಾಧಿಕಾರಿಗಳು ಸ್ವಾಮೀಜಿ ಅವರ ವಿರುದ್ದ ಪರಿಶಿಷ್ಟ ದೌರ್ಜನ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದ್ದರೂ ಇದುವರೆಗೂ ಅವರನ್ನು ಬಂಧಿಸದಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಚಿತ್ರದುರ್ಗ ಮುರುಘಾ ಮಠದ ಶ್ರೀ ಮುರುಘಾ ಶರಣರು ಮಠದ ವಸತಿ ನಿಲಯದಲ್ಲಿನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ, ಈ ಸಂಬಂಧ ವಿದ್ಯಾರ್ಥಿನಿಯರು ಪೋಲೀಸರಿಗೆ ದೂರು ನೀಡಿದ್ದಾರೆ ಎಂದರು.

ವಿದ್ಯಾರ್ಥಿನಿಯರು ದೂರು ನೀಡಿದ ಹಿನ್ನೆಲೆಯಲ್ಲಿ ಸ್ವಾಮೀಜಿ ವಿರುದ್ದ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ, ಪರಿಶಿಷ್ಟ ದೌರ್ಜನ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದ್ದರೂ ಇದುವರೆಗೂ ಅವರನ್ನು ಬಂಧಿಸದೇ ಕಾನೂನನ್ನು ದುರ್ಬಲಗೊಳಿಸುತ್ತಿರುವುದು ವಿಷಾದದ ಸಂಗತಿ ಎಂದು ಹೇಳಿದರು.

ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ಅವರನ್ನು ಕೂಡಲೇ ಬಂಧಿಸುವ ಕಾನೂನಿದ್ದರೂ ಸ್ವಾಮೀಜಿಯವರನ್ನು ಬಂಧಿಸದಿರುವುದು ಖಂಡನೀಯ ಎಂದ ಪದಾಧಿಕಾರಿಗಳು ಪೋಲೀಸರು ಯಾವುದೇ ಮುಲಾಜಿಗೂ ಒಳಗಾಗದೇ ಕೂಡಲೇ ಮುರುಘಾ ಶರಣರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ತಾಲ್ಲೂಕು ಸಂಯೋಜಕಿ ಕೆ.ಎಸ್.ಮಂಜುಳಾ, ಸಹೋದರತ್ವ ಸಮಿತಿ ಜಿಲ್ಲಾಧ್ಯಕ್ಷೆ ಕೆ.ಬಿ.ಸುಧಾ, ಪಕ್ಷದ ಮುಖಂಡರಾದ ಶ್ರೀನಿವಾಸ್, ಅಣ್ಣಯ್ಯ, ದೊಡ್ಡಯ್ಯ, ಅಂಗಡಿ ಚಂದ್ರು, ಗೌಸ್ ಮುನೀರ್, ಪುಟ್ಟಸ್ವಾಮಿ, ಆರ್.ವಸಂತ, ಹೊನ್ನಪ್ಪ, ನವೀನ್, ಹುಣಸೇಮಕ್ಕಿ ಲಕ್ಷ್ಮಣ್ ಜಿ.ಕೆ.ಬಸವರಾಜ್, ವಿಜಯಕುಮಾರ್, ಜಯಚಂದ್ರ, ರಾಜೇಗೌಡ, ಜಯಪ್ರಕಾಶ್ ಹಾಜರಿದ್ದರು.