ಚಿಕ್ಕಮಗಳೂರು : ಯುವಜನತೆ ಶಿಕ್ಷಣವಂತರಾಗುವುದರ ಜೊತೆಗೆ ಸಂಸ್ಕಾರವಂತರೂ ಆಗಬೇಕು : ಸಿ.ನಂಜಯ್ಯ.

220
firstsuddi

ಚಿಕ್ಕಮಗಳೂರು : ಯುವಜನತೆ ಶಿಕ್ಷಣವಂತರಾಗುವುದರ ಜೊತೆಗೆ ಸಂಸ್ಕಾರವಂತರೂ ಆಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ನಂಜಯ್ಯ ಸಲಹೆ ಮಾಡಿದರು.
ನಗರದ ಮಲೆನಾಡು ವಿದ್ಯಾಸಂಸ್ಥೆಯ ಸುಂದರಮ್ಮ ಶಂಕರಮೂರ್ತಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘ ಹಾಗೂ ಪಠ್ಯ-ಪಠ್ಯೇತರ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಮಕ್ಕಳು ಶೈಕ್ಷಣಿಕವಾಗಿ ಎಲ್ಲಾ ಹಂತಗಳಲ್ಲೂ ಮುಂದಿರಬೇಕು ಎಂದು ಪೋಷಕರು ಕನಸು ಕಂಡಿರುತ್ತಾರೆ, ಶಿಕ್ಷಣ ಸಂಸ್ಥೆಗಳೂ ಸಹ ಅದನ್ನೇ ನಿರೀಕ್ಷಿಸಿರುತ್ತವೆ ಆ ಕನಸನ್ನು ನನಸಾಗಿಸುವುದು ನಮ್ಮ ಜವಾಬ್ದಾರಿ ಎಂದು ವಿದ್ಯಾರ್ಥಿಗಳು ಅರಿಯಬೇಕು ಶ್ರದ್ದೆ ಮತ್ತು ಶ್ರಮದಿಂದ ವಿದ್ಯಾರ್ಜನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕೇವಲ ಅಂಕಗಳಿಸುವುದರಿಂದ ಸರ್ವತೋಮುಖ ಬೆಳವಣಿಗೆಯಾಗುವುದಿಲ್ಲ, ವಿದ್ಯೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು, ಸಂಸ್ಕೃತಿ, ಸಂಸ್ಕಾರ, ವಿನಯ, ವಿಧೇಯತೆ, ಸನ್ನಡತೆ ಮೈಗೂಡಿಸಿಕೊಳ್ಳಬೇಕು ಆಗ ಮಾತ್ರ ಉತ್ತಮ ನಾಗರೀಕರಾಗಲು ಸಾಧ್ಯವಾಗುತ್ತದೆ ಎಂದರು.
ಮಲೆನಾಡು ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯ್‍ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣವಂತರಾದರೆ ಸಾಲದು ಉತ್ತಮ ನಾಗರೀಕರಾಗಿಯೂ ರೂಪಗೊಳ್ಳಬೇಕು, ಕಾಲೇಜಿಗೆ ಕೀರ್ತಿ ತರಬೇಕು ಎಂದು ಸಲಹೆ ಮಾಡಿದರು.
ಉಪಾಧ್ಯಕ್ಷೆ ರಾಧಾ ಸುಂದರೇಶ್ ಮಾತನಾಡಿ ಶ್ರದ್ದೆ ಮತ್ತು ಶ್ರಮದಿಂದ ವಿದ್ಯಾರ್ಜನೆ ಮಾಡಿದರೆ ಮಾತ್ರ ಶಿಕ್ಷಣವಂತರಾಗಲು ಸಾಧ್ಯವಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯೆ ಎಂ.ಬಿ.ಜಯಶ್ರೀ ವಿದ್ಯಾರ್ಥಿ ದೆಸೆಯಲ್ಲೇ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಕಾಲೇಜಿನಲ್ಲಿ ಪ್ರತೀವರ್ಷ ವಿದ್ಯಾರ್ಥಿ ಸಂಘವನ್ನು ರಚಿಸಲಾಗುತ್ತಿದೆ ಎಂದು ತಿಳಿಸಿದರು.
ಅತಿ ಹೆಚ್ಚು ಅಂಕ ಗಳಿಸಿದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಸಂಸ್ಥೆಯ ಅಧ್ಯಕ್ಷ ಎನ್.ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಹಕಾರ್ಯದರ್ಶಿ ಎಸ್.ಶಂಕರನಾರಾಯಣ ಭಟ್, ಆಡಳಿತಾಧಿಕಾರಿ ಶಾಂತಕುಮಾರಿ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಹೆಚ್.ಕೆ.ಸುಭಾಷ್ ಕಾರ್ಯಕ್ರಮವನ್ನು ನಿರೂಪಿಸಿದರು, ಎಸ್.ಎಲ್.ಮಾನಸ ಸ್ವಾಗತಿಸಿದರು, ಎಂ.ಆರ್.ಗಂಗಾಧರ್ ವಂದಿಸಿದರು.