ಚಿಕ್ಕಮಗಳೂರು : ಲಾರಿಗಳ ನಿಲ್ದಾಣಕ್ಕೆ ಸೂಕ್ತ ಸ್ಥಳಾವಕಾಶ ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ…

100
firstsuddi

ಚಿಕ್ಕಮಗಳೂರು: ಲಾರಿಗಳ ನಿಲ್ದಾಣಕ್ಕೆ ನಗರದಲ್ಲಿ ಸೂಕ್ತ ಸ್ಥಳಾವಕಾಶ ಮಾಡಿಕೊಡುವಂತೆ ತಾಲೂಕು ಲಾರಿ ಮಾಲೀಕರ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ನಿನ್ನೆ ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ಲಾರಿಗಳನ್ನು ನಿಲ್ಲಿಸಲು ನಗರದಲ್ಲಿ ಇದುವರೆಗೆ ಸೂಕ್ತ ಸ್ಥಳವನ್ನು ನಿಗದಿಗೊಳಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲಾರಿ ನಿಲ್ದಾಣವನ್ನು ನಿಗದಿಗೊಳಿಸದಿರುವುದರಿಂದಾಗಿ ಲಾರಿ ಮಾಲೀಕರು ತಮ್ಮ ಲಾರಿಗಳನ್ನು ನಿಲ್ಲಿಸಲು ಸ್ಥಳವಿಲ್ಲದೆ ಪರದಾಡುತ್ತಿದ್ದಾರೆ. ಅನಿವಾರ್ಯವಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ ಎಂದರು.

ರಸ್ತೆ ಬದಿಗಳಲ್ಲಿ ಲಾರಿಗಳನ್ನು ನಿಲ್ಲಿಸಿದರೆ ಪೊಲೀಸರು ಅಲ್ಲಿಂದ ಬೇರೆಕಡೆ ತೆರಳುವಂತೆ ಸೂಚಿಸುತ್ತಾರೆ. ಹಾಗಾಗಿ ಲಾರಿ ಮಾಲೀಕರು ಲಾರಿ ನಿಲ್ಲಿಸಲು ಸೂಕ್ತ ಸ್ಥಳವಿಲ್ಲದೆ ಹೈರಾಣಾಗಿದ್ದಾರೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಲಾರಿಗಳನ್ನು ನಿಲ್ಲಿಸಲು ನಗರದಲ್ಲಿ ಸೂಕ್ತ ಸ್ಥಳವೊಂದನ್ನು ನಿಗದಿಗೊಳಿಸಿ ಲಾರಿ ನಿಲ್ದಾಣವನ್ನು ನಿರ್ಮಿಸಬೇಕೆಂದು ಆಗ್ರಹಿಸಿದರು.

ಹೊರ ಊರುಗಳಿಗೆ ಸಾಮಾನು ಸರಂಜಾಮುಗಳನ್ನು ಹೊತ್ತೊಯ್ಯುವ ಲಾರಿಗಳ ಬಾಡಿಗೆಯ ಶೇ.90ರಷ್ಟು ಹಣವನ್ನು ಮೊದಲೇ ಪಾವತಿಸಬೇಕು. ಆ ಸಂಬಂಧ ಅಧಿಕಾರಿಗಳು, ಮಿಲ್ ಮಾಲೀಕರು, ಸಂಘಟನೆಯೊಂದಿಗೆ ಸಭೆ ನಡೆಸಿ ತೀರ್ಮಾನಿಸಬೇಕು ಎಂದು ಒತ್ತಾಯಿಸಿದರು.

ಲಾರಿ ಮಾಲೀಕರ ಸಂಘದ ತಾಲೂಕುಅಧ್ಯಕ್ಷ ಸೋಮಾನಾಯಕ್, ಪದಾಧಿಕಾರಿಗಳಾದ ಕುಮಾರ್,ಅಕ್ಮಲ್,ಎಂ.ಡಿ.ಎನ್. ಭಾಷಾ, ಸಾಧಿಖ್ ಹಾಜರಿದ್ದರು.