ಚಿಕ್ಕಮಗಳೂರು : ವಾಸವಿ ಜಯಂತಿಯನ್ನು ಇನ್ನಿತರ ಜಯಂತಿಗಳಂತೆ ಸರ್ಕಾರದಿಂದ ಆಚರಿಸುವಂತೆ ಸದ್ಯದಲ್ಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು : ಟಿ.ಎ.ಶರವಣ…

355
firstsuddi

ಚಿಕ್ಕಮಗಳೂರು : ಆರ್ಯವೈಶ್ಯ ಸಮುದಾಯದ ಕುಲದೇವತೆ ವಾಸವಿ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಆರ್ಯವೈಶ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಟಿ.ಎ.ಶರವಣ ಹೇಳಿದರು.
ನಿಗಮದ ಅಧ್ಯಕ್ಷರಾಗಿ ನೇಮಕವಾದ ಹಿನ್ನೆಲೆಯಲ್ಲಿ ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಭಾನುವಾರ ಆರ್ಯವೈಶ್ಯ ಮಂಡಳಿ ಮತ್ತು ವಾಸವಿ ಯುವಜನ ಸಂಘದಿಂದ ನೀಡಿದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ವಾಸವಿ ಜಯಂತಿಯನ್ನು ಇನ್ನಿತರ ಜಯಂತಿಗಳಂತೆ ಸರ್ಕಾರದಿಂದ ಆಚರಿಸುವಂತೆ ಸದ್ಯದಲ್ಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದ ಅವರು ಆರ್ಯವೈಶ್ಯ ಸಮುದಾಯದ ಅಭಿವೃದ್ದಿಗಾಗಿ ಈಗಾಗಲೇ ಕಾರ್ಯಕ್ರಮ ಯೋಜನೆ ಮತ್ತು ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಅವುಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದರು.
ಸಂವಿಧಾನದತ್ತ ಹಕ್ಕುಗಳನ್ನು ಪಡೆದುಕೊಳ್ಳಬೇಕಾದರೆ ಆರ್ಯವೈಶ್ಯ ಸಮುದಾಯದವರು ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗೂಡಿ ಸಂಘಟಿತರಾಗಬೇಕು, ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನಮ್ಮ ಪಾಡಿಗೆ ನಾವು ಸುಮ್ಮನೆ ಕುಳಿತಿದ್ದರೆ ಯಾವ ಸರ್ಕಾರವೂ ಮನೆ ಬಾಗಿಲಿಗೆ ಬಂದು ಹಕ್ಕು ಮತ್ತು ಸವಲತ್ತುಗಳನ್ನು ಕೊಡುವುದಿಲ್ಲ, ನಾವು ಒಗ್ಗೂಡಿ ಹೋರಾಟ ಮಾಡಿದರೆ ಮಾತ್ರ ಹಕ್ಕನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ವೆಂಕಟಸುಬ್ಬರಾವ್ ಮಾತನಾಡಿ ಜನಾಂಗದ ಸಮುದಾಯ ಭವನ ನಿರ್ಮಾಣಕ್ಕೆ ನಗರದಲ್ಲಿ ಸರ್ಕಾರದಿಂದ ನಿವೇಶನವನ್ನು ದೊರಕಿಸಿ ಕೊಡುವಂತೆ ನಿಗಮದ ಅಧ್ಯಕ್ಷರಿಗೆ ಮನವಿ ಮಾಡಿದರು.
ನಿಗಮದ ಅಧ್ಯಕ್ಷರಾದ ನಂತರ ನಗರಕ್ಕೆ ಮೊದಲ ಬಾರಿಗೆ ಆಗಮಿಸಿದ ಶರವಣ ದಂಪತಿಗೆ ವಾಸವಿ ಯುವಜನ ಸಂಘ ಮತ್ತು ಆರ್ಯವೈಶ್ಯ ಮಂಡಳಿ ವತಿಯಿಂದ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ನಂತರ ದೇವಾಲಯದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ವಾಸವಿ ಯುವಜನ ಸಂಘದ ಅಧ್ಯಕ್ಷ ದಿನೇಶ್ ಗುಪ್ತಾ, ಸಂಘಟನಾ ಕಾರ್ಯದರ್ಶಿಗಳಾದ ವಿನಯ್ ಕುಮಾರ್, ಎನ್.ವಿ.ಮಹೇಶ್, ಕಾರ್ಯರ್ಶಿ ರಾಮಕೃಷ್ಣ, ಆರ್ಯವೈಶ್ಯ ಮಂಡಳಿಯ ಉಪಾಧ್ಯಕ್ಷರಾದ ಎಂ.ಆರ್.ಗುರುಮೂರ್ತಿ, ಸತ್ಯ ಪ್ರಕಾಶ್, ಸಹಕಾರ್ಯದರ್ಶಿ ಕಾಮಧೇನು ವಾಸು, ಮಹಿಳಾ ಮಂಡಳಿ ಅಧ್ಯಕ್ಷೆ ಗಾಯತ್ರಿ ದ್ವಾರಕಾನಾಥ್, ವಾಸವಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಪಿ.ಎಸ್.ವೆಂಕಟೇಶ್, ಶೀಲಾ ದೇವಿ ಉಪಸ್ಥಿತರಿದ್ದರು.