ಚಿಕ್ಕಮಗಳೂರು : ಶೈಕ್ಷಣಿಕ ವರ್ಷಾರಂಭದ ಪ್ರಯುಕ್ತ ಶಾಲೆಯಲ್ಲಿ ಸರಸ್ವತಿ ಪೂಜೆ…

206
firstsuddi

ಚಿಕ್ಕಮಗಳೂರು : ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಪ್ರಸಕ್ತ ಸಾಲಿನ ಶಾಲಾ ಆರಂಭೋತ್ಸವವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.
ಶೈಕ್ಷಣಿಕ ವರ್ಷಾರಂಭದ ಪ್ರಯುಕ್ತ ನಸುಕಿನಲ್ಲೇ ಶಾಲೆಗೆ ಆಗಮಿಸಿದ್ದ ಶಿಕ್ಷಕರು ರಂಗವಲ್ಲಿ ಹಾಕಿ, ತಳಿರು ತೋರಣಗಳನ್ನು ಕಟ್ಟಿ ಶಾಲೆಯನ್ನು ನವ ವಧುವಿನಂತೆ ಸಿಂಗರಿಸಿದ್ದರು.
ಶಾಲೆಯ ಆರಂಭದ ಸಮಯವಾಗುತ್ತಿದ್ದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ಸರಸ್ವತಿ ಪೂಜೆ ನೆರವೇರಿಸಿದರು, ನಂತರ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳ ಮೇಲೆ ಪುಷ್ಪವೃಷ್ಠಿ ಮಾಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಜಯರಾಂ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಇಲಾಖೆಯಿಂದ ಈಗಾಗಲೇ ತಾಲ್ಲೂಕಿನಾದ್ಯಂತ ಒಂದು ಸುತ್ತು ವಿಶೇಷ ದಾಖಲಾತಿ ಆಂದೋಲನ ನಡೆಸಲಾಗಿದ್ದು, ಇನ್ನೂ ಒಂದು ಬಾರಿ ನಡೆಸಲಾಗುವುದು ಎಂದರು.
ಸಾಮಾನ್ಯ ದಾಖಲಾತಿ ಆಂದೋಲನ ಜೂನ್ 1 ರಿಂದ 30 ರ ವರೆಗೆ ನಡೆಸಲಾಗುವುದು ಎಂದ ಅವರು ನಗರದ ಬಸವನಹಳ್ಳಿ, ಗೃಹಮಂಡಳಿ ಬಡಾವಣೆ, ಕಳಸಾಪುರ, ಮಾಚಗೊಂಡನಹಳ್ಳಿ ಮತ್ತು ಮಲ್ಲಂದೂರಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಈ ಸಾಲಿನಿಂದ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮತ್ತು ಸಿಹಿ ವಿತರಿಸಲಾಯಿತು, ಅಕ್ಷರ ದಾಸೋಹ ಸಹನಿರ್ದೇಶಕ ಉದಯಕುಮಾರ್, ಸಿಆರ್‍ಪಿ ಪ್ರದೀಪ್, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಶ್ರೀಧರ್, ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ, ಶಿಕ್ಷಕರಾದ ಎಸ್.ಈ.ಲೋಕೇಶ್ವರಾಚಾರ್, ನಾಗವೇಣಿ, ಜಯಂತಿ, ಸಾವಿತ್ರಿ ಹಾಜರಿದ್ದರು.