ಚಿಕ್ಕಮಗಳೂರು : ಶೋಷಿತ ವರ್ಗದವರಿಗೆ ರಾಜಕೀಯದ ದಿಕ್ಕನ್ನು ತೋರಿಸಿಕೊಟ್ಟವರು ಕಾನ್ಷಿರಾಮ್ ಸಾಹೇಬರು : ಕೆ.ಟಿ.ರಾಧಾಕೃಷ್ಣ.

154
Firstsuddi

ಚಿಕ್ಕಮಗಳೂರು : ನಗರದ ಜೀವನ ಸಂಧ್ಯಾ ವೃದ್ದಾಶ್ರಮದ ಆವರಣವನ್ನು ಶ್ರಮದಾನದೊಂದಿಗೆ ಸ್ವಚ್ಚಗೊಳಿಸುವ ಮೂಲಕ ಬಿಎಸ್‍ಪಿ ಪದಾಧಿಕಾರಿಗಳು ಪಕ್ಷದ ಸಂಸ್ಥಾಪಕ ದಾದಾ ಸಾಹೇಬ್ ಕಾನ್ಷೀರಾಮ್ ಅವರ ಜನ್ಮ ದಿನವನ್ನು ನಿನ್ನೆ ಅರ್ಥಪೂರ್ಣವಾಗಿ ಆಚರಿಸಿದರು.

ಬೆಳಿಗ್ಗೆ ವೃದ್ದಾಶ್ರಮಕ್ಕೆ ತೆರಳಿದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಂಜೆಯವರೆಗೆ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಿತ್ತುಹಾಕುವ ಮೂಲಕ ಸ್ವಚ್ಚಗೊಳಿಸಿದರು. ಕೊರೊನಾ ಹಿನ್ನೆಲೆಯಲ್ಲಿ ಹೊರಗಿನಿಂದ ತಂದ ಊಟಕ್ಕೆ ಆಶ್ರಮದಲ್ಲಿ ಅವಕಾಶವಿಲ್ಲದ್ದರಿಂದಾಗಿ ಹಿರಿಯ ನಾಗರೀಕರಿಗೆ ಹಣ್ಣು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ದೇಶದ ಬಹುಸಂಖ್ಯಾತರು ಮತ್ತು ಶೋಷಿತ ವರ್ಗದವರಿಗೆ ರಾಜಕೀಯದ ದಿಕ್ಕನ್ನು ತೋರಿಸಿಕೊಟ್ಟವರು ಕಾನ್ಷಿರಾಮ್ ಸಾಹೇಬರು ಎಂದು ಹೇಳಿದರು.

ಬಹು ಸಂಖ್ಯಾತ ಶೋಷಿತ ವರ್ಗ ಅಧಿಕಾರ ಹಿಡಿದಾಗ ಮಾತ್ರ ಆ ಸಮುದಾಯದ ಅಭಿವೃದ್ದಿಯಾಗುತ್ತದೆ ಎಂದು ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ನಂಬಿದ್ದರು. ಶೋಷಿತ ವರ್ಗ ಅಧಿಕಾರಕ್ಕೆ ಬರುವುದು ಅವರ ಕನಸಾಗಿತ್ತು ಎಂದರು.

ಬಹುಜನ ಸಮಾಜ ಪಕ್ಷವನ್ನು ಸ್ಥಾಪಿಸಿ ಸಾವಿರಾರು ಕಿ.ಮೀ ನಷ್ಟು ದೂರ ಸೈಕಲ್‍ನಲ್ಲಿ ಸಂಚರಿಸಿ ಹಳ್ಳಿಹಳ್ಳಿಗಳಿಗೆ ತೆರಳಿ ಶೋಷಿತರನ್ನು ಜಾಗೃತಗೊಳಿಸಿ ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಕಾನ್ಷೀರಾಮ್ ಅವರು ಅಂಬೇಡ್ಕರ್ ಅವರ ಕನಸನ್ನು ನನಸಾಗಿಸಿದರು ಎಂದು ತಿಳಿಸಿದರು.

ವಿ.ಪಿ.ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸುವಂತೆ ನೀಡಿದ ಆಹ್ವಾನವನ್ನು ತಿರಸ್ಕರಿಸಿ ಅದರ ಬದಲಿಗೆ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಒತ್ತಾಯಿಸಿದ ಮಹಾತ್ಮರು ಕಾನ್ಷೀರಾಮ್ ಅವರು ಎಂದು ಹೇಳಿದರು.

ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ ಮಾತನಾಡಿ ಕಾನ್ಷೀರಾಮ್ ಅವರ ಆದರ್ಶಗಳು ಮತ್ತು ಸಂದೇಶಗಳನ್ನು ಶೋಷಿತ ವರ್ಗದ ಯುವ ಜನತೆ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಬಿಎಸ್‍ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ಜಿಲ್ಲಾ ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಪದಾಧಿಕಾರಿಗಳಾದ ಕೆ.ಎಸ್.ಮಂಜುಳಾ, ಪುಷ್ಪಾ, ವಸಂತಕುಮಾರ್, ನವೀನ್ ಉಪಸ್ಥಿತರಿದ್ದರು.