ಚಿಕ್ಕಮಗಳೂರು : ಶ್ರೀ ಬೋಳರಾಮೇಶ್ವರ ದೇವಾಲಯದಲ್ಲಿ ವೈಭವದಿಂದ ನಡೆದ ಕಾರ್ತೀಕ ದೀಪೋತ್ಸವ…

25
firstsuddi

ಚಿಕ್ಕಮಗಳೂರು : ನಗರದ ಇತಿಹಾಸ ಪ್ರಸಿದ್ದ ಶ್ರೀ ಬೋಳರಾಮೇಶ್ವರ ದೇವಾಲಯದಲ್ಲಿ ಕಾರ್ತೀಕ ಮಾಸದ ಕೊನೆಯ ದಿನವಾದ ನಿನ್ನೆ ವಾರ್ಷಿಕ ಕಾರ್ತೀಕ ದೀಪೋತ್ಸವ ನೂರಾರು ಭಕ್ತರ ನಡುವೆ ವೈಭವದಿಂದ ನಡೆಯಿತು.

ದೀಪೋತ್ಸವದ ಪ್ರಯುಕ್ತ ಬೆಳಗ್ಗೆ ದೇವಾಲಯದಲ್ಲಿ ಅಧಿದೇವತೆಗಳಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಜರುಗಿತು. ಸಂಜೆಯಾಗುತ್ತಿದ್ದಂತೆ ದೇವಾಲಯಕ್ಕೆ ಆಗಮಿಸಿದ ನೂರಾರು ಭಕ್ತರು ದೇವಾಲಯದ ಆವರಣದಲ್ಲಿ ಸಾಮೂಹಿಕವಾಗಿ ಸಹಸ್ರಾರು ದೀಪದ ಹಣತೆಗಳನ್ನು ಹಚ್ಚಿ ಸಂಭ್ರಮಿಸಿದರು.

ರಾತ್ರಿ 8 ಗಂಟೆಗೆ ಪ್ರಧಾನ ಅರ್ಚಕ ಡಿ.ಆರ್.ಕುಮಾರಸ್ವಾಮಿ ಅವರು ಮಹಾಮಂಗಳಾರತಿಯೊಂದಿಗೆ ವೇದಘೋಷಗಳ ನಡುವೆ ದೇವಾಲಯದ ಮುಂಭಾಗದಲ್ಲಿ ಕಾರ್ತಿಯನ್ನು ಬೆಳಗಿಸಿದರು.

ದೀಪೋತ್ಸವದ ನಂತರ ದೇವಾಲಯದ ಅಧಿದೇವತೆಗಳಿಗೆ ರಕ್ಷಾ ಧಾರಣೆ ಮಾಡಲಾಯಿತು. ಕಾರ್ತೀಕ ಮಾಸದ ಕೊನೆಯ ದಿನವಾದ ಹಿನ್ನೆಲೆಯಲ್ಲಿ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಬೆಳಗಿನಿಂದ ರಾತ್ರಿಯವರೆಗೆ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪುಷ್ಪಾ ರಾಜೇಂದ್ರ, ಕೆ.ಎಸ್.ನಂಜುಂಡರಾವ್, ಮಂಜುನಾಥ್, ಉಮೇಶ್, ಡಿ.ಎನ್.ಮೋಹನ್, ಬಸವರಾಜ್ ಹಾಜರಿದ್ದರು.