ಚಿಕ್ಕಮಗಳೂರು : ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ಖಂಡಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದ ಜೆಡಿಎಸ್ ಯುವ ಜನತಾದಳ…

221
firstsuddi

ಚಿಕ್ಕಮಗಳೂರು : ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆಯನ್ನು ಜೆಡಿಎಸ್ ಯುವ ಜನತಾದಳ ಖಂಡಿಸಿ ಪ್ರತಿಭಟಿಸಿದರು. ತೇಜಸ್ವಿ ಸೂರ್ಯ ಅವರು ಹೊಸ ವರ್ಷದಂದು ಎದೆ ಸೀಳಿದರೆ ನಾಲ್ಕು ಅಕ್ಷರ ಇಲ್ಲದವರು ಹಾಗೂ ಪಂಕ್ಚರ್ ಅಂಗಡಿಯವರು ಪ್ರತಿಭಟನೆ ಮಾಡುತ್ತಾರೆ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡುತ್ತಾರೆ ಎಂಬ ವಿವಾಧಾತ್ಮಕ ಹೇಳಿಕೆಯನ್ನು ನೀಡಿದ್ದು, ಇದನ್ನು ಖಂಡಿಸಿ ಜಿಲ್ಲಾ ಯುವ ಜನತಾದಳದ ಅಧ್ಯಕ್ಷರಾದ ಹೆಚ್.ಡಿ. ವಿನಯ್ ರಾಜ್ ನೇತೃತ್ವದಲ್ಲಿ ನಗರದ ಮಲ್ಲಂದೂರು ರಸ್ತೆಯಲ್ಲಿರುವ ಪಂಕ್ಚರ್ ಅಂಗಡಿಗೆ ತೆರಳಿ ಗುಲಾಬಿ ಹೂವು ನೀಡಿದರು.
ಬಳಿಕ ಮಾತನಾಡಿದ ಯುವ ಜನತಾ ದಳದ ಜಿಲ್ಲಾ ಅಧ್ಯಕ್ಷ ವಿನಯ್ ರಾಜ್ ಅವರು, ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ ಹೊಸವರ್ಷದ ಸಂದರ್ಭದಲ್ಲಿ ಹೇಳಿಕೆ ನೀಡಿ, ಎದೆ ಸೀಳಿದರೆ ನಾಲ್ಕು ಅಕ್ಷರ ಜ್ಞಾನ ಇಲ್ಲದವರು ಹಾಗೂ ಪಂಕ್ಚರ್ ಅಂಗಡಿಯವರು ಸಿಎಬಿ ಖಾಯ್ದೆ ಬಗ್ಗೆ ಮಾತನಾಡುತ್ತಾರೆ ಎಂದು ತಮ್ಮ ಕೀಳುಮಟ್ಟದ ರಾಜಕೀಯ ಪ್ರದರ್ಶನ ಮಾಡಿರುವುದು ಖಂಡನಾರ್ಹವಾದುದು. ವೃತ್ತಿಯಲ್ಲಿ ಮೇಲು ಕೀಳು ಸಲ್ಲದು. ಎಲ್ಲರಿಗೂ ಸಮಾಜದಲ್ಲಿ ಅವರದ್ದೇ ಆದ ಘನತೆ ಗೌರವ ಇರುತ್ತದೆ. ಹಾಗಾಗಿ ಇಂತಹ ಹೇಳಿಕೆಗಳ ಮೂಲಕ ಕಾರ್ಮಿಕರನ್ನು ಹಾಗೂ ಪಂಕ್ಚರ್ ಹಾಕುವವರನ್ನು ಅವಮಾನಿಸಿರುವ ತೇಜಸ್ವಿ ಸೂರ್ಯ ಅವರ ಮನಸ್ಥಿತಿ ವಿರುದ್ಧ ಪ್ರತಿಭಟಿಸಿದ್ದೇವೆ. ಪಂಕ್ಚರ್ ಹಾಕುವ ಕಾರ್ಮಿಕರಿಗೆ ಹೂಗುಚ್ಚ ನೀಡಿ ಸಿಹಿ ತಿನ್ನಿಸುವ ಮೂಲಕ ಅವರೊಂದಿಗೆ ಜೆಡಿಎಸ್ ಯುವ ಜನತಾದಳ ಇರುತ್ತದೆ ಎಂಬ ಸಂದೇಶ ನೀಡುವ ಸಲುವಾಗಿ ಸಾಂಕೇತಿಕವಾಗಿ ಈ ವಿನೂತನ ಪ್ರತಿಭಟನೆ ಮಾಡಿದ್ದೇವೆ ಎಂದರು.