ಚಿಕ್ಕಮಗಳೂರು : ಸಾಮೂಹಿಕ ಶ್ರಮದಾನದೊಂದಿಗೆ ಶ್ವಚ್ಛಗೊಳಿಸುವ ಮೂಲಕ ಬಸವಣ್ಣನವರ ಜನ್ಮ ದಿನ…

185
firstsuddi

ಚಿಕ್ಕಮಗಳೂರು; ಬಹುಜನ ಸಮಾಜ ಪಕ್ಷ ಮತ್ತು ಜಿಲ್ಲಾ ಸಹೋದರತ್ವ ಸಮಿತಿಯ ಕಾರ್ಯಕರ್ತರು ಇಲ್ಲಿನ ಗಾಂಧಿನಗರ ಬಡಾವಣೆಯನ್ನು ಸಾಮೂಹಿಕ ಶ್ರಮದಾನದೊಂದಿಗೆ ಶಚ್ಛಗೊಳಿಸುವ ಮೂಲಕ ಕಾಯಕ ಯೋಗಿ ಭಕ್ತಿಭಂಡಾರಿ ಬಸವಣ್ಣನವರ ಜನ್ಮ ದಿನವನ್ನು ಇಂದು ಅರ್ಥಪೂರ್ಣವಾಗಿ ಆಚರಿಸಿದರು.

ಕತ್ತಿ ಹಾರೆ ಗುದ್ದಲಿ ಪಿಕಾಸಿ ಬುಟ್ಟಿ ಸೇರಿದಂತೆ ಇನ್ನೀತರ ಪರಿಕರಗಳೊಂದಿಗೆ ಬೆಳಿಗ್ಗೆ ಗಾಂಧಿನಗರದಲ್ಲಿ ಜಮಾಯಿಸಿದ ಕಾರ್ಯಕರ್ತರು ಅಲ್ಲಿನ ಸಾರ್ವಜನಿಕ ಉದ್ಯಾನವನ ರಸ್ತೆಯ ಇಕ್ಕೆಲಗಳು ಮತ್ತು ಖಾಲಿ ನಿವೇಶನಗಳಲ್ಲಿ ಬಿದಿದ್ದ ಕಸದ ರಾಶಿಯನ್ನು ಬಾಚಿ ಬುಟ್ಟಿಗಳಲ್ಲಿ ತುಂಬಿ ನಗರಸಭೆಯ ಟ್ರ್ಯಾಕ್ಟರ್‍ಗೆ ಹಾಕಿದರು.

ರಸ್ತೆಯ ಇಕ್ಕೆಲಗಳು ಪಾರ್ಕ್ ಮತ್ತು ಖಾಲಿನಿವೇಶನಗಳಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಿತ್ತು ಸ್ವಚ್ಚಗೊಳಿಸಿದರು. ಇದಕ್ಕೂ ಮುನ್ನ ಶ್ರಮದಾನಕ್ಕೆ ಚಾಲನೆ ನೀಡಿ ಮಾತನಾಡಿದ ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಜಾತಿ ವ್ಯವಸ್ಥೆ, ಅಸಮಾನತೆ, ಅಶ್ಪøಷ್ಯತೆ ಹಾಗೂ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ನಡೆಸುವ ಮೂಲಕ ಸಮಸಮಾಜದ ನಿರ್ಮಾಣ ಮಾಡಿದ ಮಹಾನ್ ಚೇತನ ಭಕ್ತಿ ಭಂಡಾರಿ ಬಸವಣ್ಣನವರು ಎಂದರು.

ಕಾಯಕವೇ ಕೈಲಾಸ ಎಂಬುದನ್ನು ಬರೀ ಬಾಯಿ ಮಾತಿನಲ್ಲಿ ಹೇಳದೆ ಸ್ವತಃ ಕಾಯಕ ಮಾಡುವ ಮೂಲಕ ಮಾದರಿಯಾಗಿರುವ ಬಸವಣ್ಣನವರ ಆದರ್ಶಗಳು ತತ್ವ ಸಿದ್ದಾಂತಗಳು ಸಂದೇಶಗಳು ಮತ್ತು ವಚನಗಳನ್ನು ಇಂದಿನ ಜನತೆ ಅನುಷ್ಠಾನಕ್ಕೆ ತಂದಲ್ಲಿ ದೇಶದಲ್ಲಿ ಅಸಮಾನತೆ, ಅಸ್ಪøಷ್ಯತೆ, ಜಾತೀಯತೆ ತೊಲಗುತ್ತವೆ ಸಮತಾ ಸಮಾಜದ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ ಮಾತನಾಡಿ, ಮಹಿಳೆಯರು ಸಮಾಜದ ಕಟ್ಟುಪಾಡುಗಳಿಂದ ಬಂಧಿತರಾಗಿ ಅಡುಗೆ ಮನೆಗಷ್ಟೇ ಸೀಮಿತವಾಗಿದ್ದ ಅಂದಿನ ಕಾಲದಲ್ಲಿ ಮಹಿಳಾ ಪರಿಷತ್ ಮತ್ತು ಅನುಭವ ಮಂಟಪವನ್ನು ಸ್ಥಾಪಿಸಿ ಮಹಿಳೆಯರಿಗೂ ಸಮಾನತೆ ಕಲ್ಪಿಸಿದ ಮಹಾತ್ಮಾರು ಬಸವಣ್ಣನವರು ಎಂದು ತಿಳಿಸಿದರು.

ಬಿಎಸ್‍ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ಜಿಲ್ಲಾ ಕಚೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ನಗರಾಧ್ಯಕ್ಷ ಹನುಮಂತರಾಯ, ಪುಷ್ಪಾವತಿ, ರೇಖಾ, ವಿನಿತ್, ನವೀನ್, ರವಿ, ಧನಂಜಯ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.