ನವದೆಹಲಿ: ಚೀನಾ ಭಾರತದ ಶತ್ರುವಲ್ಲ ಎಂಬ ಹೇಳಿಕೆ ನೀಡುವ ಮೂಲಕ ಸಾಗರೋತ್ತರ ಭಾರತೀಯ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಮಾಧ್ಯಮಗಾರರ ಜೊತೆ ಮಾತನಾಡಿದ ಸ್ಯಾಮ್ ಪಿತ್ರೋಡಾ, ಭಾರತ ಮತ್ತು ಚೀನಾ ಪರಸ್ಪರ ವಿರೋಧಿಗಳಲ್ಲ. ಚೀನಾ ಭಾರತದ ಶತ್ರು ರಾಷ್ಟ್ರವಲ್ಲ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಉಭಯ ದೇಶಗಳ ನಡುವಿನ ಗಡಿ ಘರ್ಷಣೆಯನ್ನೇ ಬಂಡವಾಳ ಮಾಡಿಕೊಂಡು ಚೀನಾ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದೆ, ಚೀನಾದ ಬಗ್ಗೆ ಭಾರತ ಹೊಂದಿರುವ ಮನಸ್ಥಿತಿ ಬದಲಾಗಬೇಕಿದೆ ಎಂದು ಹೇಳಿದ್ದಾರೆ. ಭಾರತಕ್ಕೆ ಚೀನಾದಿಂದ ಬೆದರಿಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇದು ಅಮೆರಿಕವು ತನ್ನ ಶತ್ರು ರಾಷ್ಟ್ರಗಳನ್ನು ವ್ಯಾಖ್ಯಾನಿಸುವ ಪ್ರವೃತ್ತಿಯ ಒಂದು ಅನುಕರಣೆಯಾಗಿದೆ. ಒಗ್ಗಟ್ಟಾಗಿ ಎಲ್ಲಾ ರಾಷ್ಟ್ರಗಳು ಮುಂದುವರಿಯಬೇಕೇ ಹೊರತು ಕಾದಾಡಬಾರದು ಎಂದು ಹೇಳಿದ್ದಾರೆ. ಸ್ಯಾಮ್ ಪಿತ್ರೋಡಾ ವಿವಾದಾತ್ಮಕ ಹೇಳಿಕೆಗೆ ಕೆಂಡಾಮಂಡಲವಾಗಿರುವ ಬಿಜೆಪಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಚೀನಾದ ಏಜೆಂಟ್ ಎಂಬ ತನ್ನ ಆರೋಪ ಇದೀಗ ನಿಜವಾಗಿದೆ ಎಂದು ಕಿಡಿಕಾರಿದೆ.










