ಛತ್ತೀಸ್‍ಗಢದ ಬಿಜಾಪುರದಲ್ಲಿ 12 ನಕ್ಸಲರ ಎನ್‍ಕೌಂಟರ್.

26

ಬಿಜಾಪುರ: ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್ ನಲ್ಲಿ 12 ನಕ್ಸಲರನ್ನು ಹತ್ಯೆ ಮಾಡಲಾಗಿದೆ. ನಕ್ಸಲರ ಮೃತದೇಹಗಳನ್ನು ಉಸೂರು ಬಳಿಯ ನಂಬಿ ಕ್ಯಾಂಪ್‍ಗೆ ತರಲಾಗಿದ್ದು, ಗುರುತು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಬಸ್ತಾರ್ ಪ್ರದೇಶದ ಕಾಡುಗಳಲ್ಲಿ ಹೆಚ್ಚಿನ ಸಂಖ್ಯೆಯ ನಕ್ಸಲರು ಇರುವ ಕುರಿತು ಖಚಿತ ವರದಿಯ ಮೇರೆಗೆ ಬಿಜಾಪುರ, ಸುಕ್ಮಾ ಮತ್ತು ದಾಂತೇವಾಡೆಯಿಂದ ಜಿಲ್ಲಾ ಮೀಸಲು ಗಾರ್ಡ್ ಪಡೆಗಳು, ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ ಮತ್ತು ಸಿಆರ್‍ಪಿಎಫ್‍ನ 229 ನೇ ಬೆಟಾಲಿಯನ್ ಕಾರ್ಯಾಚರಣೆ ಪ್ರಾರಂಭಿಸಿದ್ದವು. ಬಿಜಾಪುರದ ಪೂಜಾರಿ ಕಂಕೇರ್ ಮತ್ತು ಮರುದ್ಬಾಕ ಅರಣ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಭದ್ರತಾ ಪಡೆಗಳನ್ನು ಕಂಡ ನಕ್ಸಲರು ಗುಂಡಿನ ದಾಳಿ ಆರಂಭಿಸಿದ್ದರು. ಅದಕ್ಕೆ ಪ್ರತಿಯಾಗಿ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದರು. ಬಸ್ತಾರ್ ಐಜಿ ಸುಂದರರಾಜ್ ಪಿ ಮತ್ತು ಸಿಆರ್‍ಪಿಎಫ್ ಐಜಿ ಸಂಪೂರ್ಣ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ನಿನ್ನೆ ಎನ್‍ಕೌಂಟರ್ ವೇಳೆ ಸಾವನ್ನಪ್ಪಿದ 12 ನಕ್ಸಲರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಬಿಜಾಪುರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.