ಬೆಂಗಳೂರು: ಬೆಂಗಳೂರಿನ ವಿಶೇಷ ನ್ಯಾಯಾಲಯದ ವಶದಲ್ಲಿರುವ ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಚಿನ್ನಾಭರಣ ಸೇರಿದಂತೆ ಎಲ್ಲ ವಸ್ತುಗಳನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿ ಜಯಲಲಿತಾ ಸಂಬಂಧಿಕರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಆದೇಶದಿಂದ ಪ್ರಕರಣದ ವಿಚಾರಣೆ ನಡೆಸಿದ್ದ ಕರ್ನಾಟಕ ರಾಜ್ಯ ಸರ್ಕಾರವು ತಮಿಳುನಾಡು ಸರ್ಕಾರದಿಂದ 5 ಕೋಟಿ ರೂಪಾಯಿ ವಿಚಾರಣಾ ವೆಚ್ಚ ಪಡೆಯಬಹುದಾಗಿದೆ. ಜೊತೆಗೆ, ಜಯಲಲಿತಾ ಅವರಿಗೆ ಸೇರಿದ ಎಲ್ಲ ಚಿನ್ನಾಭರಣ, ಉಡುಗೊರೆ ಹಾಗೂ ಪ್ರಕರಣದ ಮತ್ತೊಂದು ಆರೋಪಿ ಜಯಯಲಿತಾ ಆಪ್ತೆ ಶಶಿಕಲಾ ಅವರಿಗೆ ವಿಧಿಸಿದ್ದ ದಂಡದ ಮೊತ್ತವನ್ನು ತಮಿಳುನಾಡು ಸರ್ಕಾರಕ್ಕೆ ಹಿಂದಿರುಗಿಸುವ ಪ್ರಕ್ರಿಯೆಗೆ ಅಡ್ಡಿ ಇಲ್ಲದಂತಾಗಿದೆ. ಜಯಲಲಿತಾ ಸಂಬಂಧಿಗಳಾದ ದೀಪಕ್ ಮತ್ತು ಜೆ.ದೀಪಾ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ನ್ಯಾಯಪೀಠ, ಈ ಆದೇಶವನ್ನು ನೀಡಲಾಗಿದೆ.