ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂದರ್‍ಬಾಲ್ ಜಿಲ್ಲೆಯಲ್ಲಿ ಮಹತ್ವದ ಮೂಲಸೌಕರ್ಯ ಯೋಜನೆಯಾದ ಝಡ್-ಮೋರ್ಹ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಲಾಯಿತು. 2024ರ ವಿಧಾನಸಭಾ ಚುನಾವಣೆ ನಂತರ ಜಮ್ಮು ಕಾಶ್ಮೀರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಭೇಟಿಯಾಗಿದೆ. ಇಂದು ಬೆಳಗ್ಗೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ಮೋದಿ, ಹೆಲಿಕಾಪ್ಟರ್ ಮೂಲಕ ತೆರಳಿ ಸುರಂಗ ಮಾರ್ಗ ಉದ್ಘಾಟಿಸಿದರು. ಮೋದಿ ಜೊತೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಜಮ್ಮು ಮತ್ತು ಕಾಶ್ಮೀರದ ಸಿಎಂ ಓಮರ್ ಅಬ್ದುಲ್ಲಾ, ರಾಜ್ಯಪಾಲ ಮನೋಜ್ ಸಿನ್ಹಾ ಇತರ ನಾಯಕರು ಜೊತೆಗಿದ್ದರು. ಉದ್ಘಾಟನೆಯಾದ ನಂತರ ಸುರಂಗದ ಒಳಗೆ ತೆರಳಿದ ಮೋದಿ, ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಅತ್ಯಂತ ಕಠಿಣ ಹವಾಮಾನದಲ್ಲೂ ಶ್ರಮಪಟ್ಟು ಸುರಂಗ ನಿರ್ಮಿಸಿದ ಕಾರ್ಮಿಕರ ಜೊತೆಯೂ ಮಾತುಕತೆ ನಡೆಸಲಾಯಿತು. ಮಧ್ಯ ಕಾಶ್ಮೀರದ ಗಂದರ್‍ಬಾಲ್ ಜಿಲ್ಲೆಯ ಗಗಾಂಗೀರ್ ಮತ್ತು ಸೋನಾಮಾರ್ಗ್ ನಡುವಿನ 6.5 ಕಿಲೋಮೀಟರ್‍ಗಳ ಉದ್ದದ ಎರಡು ಪಥದ ರಸ್ತೆ ಸುರಂಗದಲ್ಲಿ ತುರ್ತು ಪರಿಸ್ಥಿತಿಗಳಿಗಾಗಿ ಸಮಾನಾಂತರ 7.5 ಮೀಟರ್ ಎಸ್ಕೆಪ್ ಮಾರ್ಗವನ್ನು ನಿರ್ಮಿಸಲಾಗಿದೆ.










