ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಬಾಂಬ್ ಬೆದರಿಕೆ ಕರೆ ಬಂದಿದೆ. ರಾಮೇಶ್ವರಂ ಕೆಫೆ ರೀತಿಯಲ್ಲಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ಗಣರಾಜ್ಯೋತ್ಸವದಂದು ನಗರದ 6 ಮಂದಿ ಗಣ್ಯರ ಮನೆ ಸ್ಪೋಟಿಸುವುದಾಗಿ ಬೆಂಗಳೂರಿನ ಪೊಲೀಸ್ ಆಯುಕ್ತರ ಕಂಟ್ರೋಲ್ ರೂಮ್ ಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಮುನ್ನೆಚ್ಚರಿಕಾ ಕ್ರಮವಾಗಿ ವಿಧಾನಸೌಧ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದು, ಇದೀಗ ಬಂದ ಮಾಹಿತಿ ಪ್ರಕಾರ ಹುಸಿ ಬಾಂಬ್ ಬೆದರಿಕೆ ಫೋನ್ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿಸಲಾಗಿದೆ. ಜ.9 ರಂದು ಸಂಜೆ ಬೆಂಗಳೂರಿನ ಪೊಲೀಸ್ ಆಯುಕ್ತರ ಕಂಟ್ರೋಲ್ ರೂಮ್ ಗೆ ಫೋನ್ ಮಾಡಿದ್ದು, ರಾಮೇಶ್ವರಂ ಕೆಫೆ ರೀತಿಯಲ್ಲೇ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಹುಸಿ ಬಾಂಬ್ ಕರೆ ಬಂದಿದೆ. ಇದೊಂದು ಹುಸಿ ಬಾಂಬ್ ಕರೆಯಾದರೂ ಸಹ ಮುನ್ನೆಚ್ಚರಿಕೆಯಾಗಿ ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಸಿಕೊಂಡಿದ್ದಾರೆ. ಇನ್ನು ಅಪರಿಚಿತ ವ್ಯಕ್ತಿ ನೀಡಿದ ವರದಿ ಮೇರೆಗೆ 6 ಮಂದಿಯ ಹೆಸರು, ವಿಳಾಸವನ್ನು ಆಯ ವ್ಯಾಪ್ತಿಯ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ. ಇನ್ನು ಶಂಕಿತ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆಗೊಳಪಡಿಸಿದ್ದಾರೆ.










