ಜಯಲಲಿತಾ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ ಆಪ್ತೆ ವಿ.ಕೆ.ಶಶಿಕಲಾ.

84
firstsuddi

ಚೆನ್ನೈ : ಜಯಲಲಿತಾ ಆಪ್ತೆ, ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ. ಶಶಿಕಲಾ ಚೆನ್ನೈನ ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಜಯಲಲಿತಾರನ್ನು ನೆನೆದು ಶಶಿಕಲಾ ಭಾವುಕರಾದರು. ಈ ನಡೆ ಇದೀಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಜಯಲಲಿತಾ ಅವರ ನಿಧನದ ಬಳಿಕ ಶಶಿಕಲಾ ಅಕ್ರಮ ಆಸ್ತಿ ಸಂಬಂಧಿಸಿದ ಪ್ರಕರಣದಲ್ಲಿ 4 ವರ್ಷ ಜೈಲು ವಾಸ ಅನುಭವಿಸಿ ಹೊರ ಬಂದಿದ್ದರು. ಬಳಿಕ ರಾಜಕೀಯದಿಂದ ದೂರ ಉಳಿದಿದ್ದ ಚಿನ್ನಮ್ಮ ಇದೀಗ ಮತ್ತೆ ರಾಜಕೀಯಕ್ಕೆ ಬರಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಅಣ್ಣಾ ಡಿಎಂಕೆ ಪಕ್ಷ ಸ್ಥಾಪನೆಗೊಂಡು ಅಕ್ಟೋಬರ್ 17ಕ್ಕೆ 50 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ರಾಜ್ಯಾದ್ಯಂತ ಸಂಸ್ಥಾಪನಾ ದಿನ ಆಚರಣೆ ಮಾಡಲು ತಯಾರಿ ನಡೆಸಿದ್ದು, ಇದೇ ದಿನ ಚಿನ್ನಮ್ಮ ಶುಭ ಸುದ್ದಿ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲದೇ ಎಐಎಡಿಎಂಕೆ ಕೇವಲ ವಿಧಾನಸಭೆ ಚುನಾವಣೆಯಲ್ಲಷ್ಟೇ ಅಲ್ಲದೆ, ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಸೋತಿದೆ. ಹೀಗಾಗಿ ಶಶಿಕಲಾ ಮತ್ತೆ ಪಕ್ಷಕ್ಕೆ ಮರಳುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ಹೇಳಲಾಗಿದೆ.