ಮುದ್ದೆಯಲ್ಲಿ ವಿಷ ಬೆರೆಸಿ ನಾಲ್ವರ ಹತ್ಯೆ – ಎಫ್ಎಸ್ಎಲ್ ವರದಿಯಿಂದ ಸತ್ಯ ಬಯಲು…

90
firstsuddi

ಚಿತ್ರದುರ್ಗ : ವಿಷ ಆಹಾರ ಸೇವಿಸಿ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್ಎಸ್ಎಲ್) ವರದಿ ಮೂಲಕ ಮುದ್ದೆಯಲ್ಲಿ ವಿಷ ಬೆರಸಿರುವ ಸತ್ಯ ಬಯಲಾಗಿದೆ.

ಜಿಲ್ಲೆಯ ಇಸಾಮುದ್ರ ಗ್ರಾಮದಲ್ಲಿ ಜುಲೈ 12 ರಂದು ಈ ಘಟನೆ ನಡೆದಿತ್ತು. ಪೋಷಕರ ಬೈಗುಳ, ಕೂಲಿಗೆ ಕಳಿಸುವುದು, ತಿರಸ್ಕಾರ ಭಾವದಿಂದ ನೊಂದ ಬಾಲಕಿ, ಹೆತ್ತವರು, ಒಡಹುಟ್ಟಿದವರಿಗೆ ಮುದ್ದೆಯಲ್ಲಿ ಕ್ರಿಮಿನಾಶಕ ಬೆರೆಸಿ ಕೊಂದಿದ್ದಳು. ರಾತ್ರಿ ಮುದ್ದೆ ಹಾಗೂ ಹೆಸರುಕಾಳು ಸಾಂಬರ್ ಸೇವಿಸಿದ ತಂದೆ ತಿಪ್ಪಾನಾಯ್ಕ್(46), ತಾಯಿ ಸುಧಾಬಾಯಿ(43), ಸಹೋದರಿ ರಮ್ಯ(16), ವೃದ್ಧೆ ಗುಂಡಿಬಾಯಿ(75) ಸಾವಿಗೀಡಾಗಿದ್ದಾರೆ. ಮತ್ತೋರ್ವ ಪುತ್ರ ರಾಹುಲ್(18) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಬಾಲಕಿ ರಕ್ಷಿತಾ ಮಾತ್ರ ಸುರಕ್ಷಿತವಾಗಿದ್ದಾಳೆ.

ಹೊಟ್ಟೆ ನೋವಿನ ಕಾರಣ ಅನ್ನ, ಸಾರು ಮಾತ್ರ ಸೇವಿಸಿದ್ದೆ ಎಂದು ರಕ್ಷಿತಾ ತಿಳಿಸಿದ್ದಳು. ಆದರೆ ಅನುಮಾನಗೊಂಡ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸಿದಾಗ,  ಕ್ರಿಮಿನಾಶಕ ಬೆರೆಸಿ ನಾಲ್ವರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಭರಮಸಾಗರ ಪೊಲೀಸರು ಬಾಲಕಿ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.