ಮಂಗಳೂರು : ಸುರತ್ಕಲ್ ನ ಕಾಟಿಪಳ್ಳದಲ್ಲಿ ನಡೆದ ಅಬ್ದುಲ್ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಮೂವರಲ್ಲಿ ಇಬ್ಬರು ಈ ಹಿಂದೆ ಹಲವು ಪ್ರಕರಣಗಳಲ್ಲಿ ಮತ್ತು 2021ರಲ್ಲಿ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಸದ್ಯ ಅವರನ್ನು ನ್ಯಾಯಾಲಯಕ್ಕೆ ಹಾಜರು ಮಾಡಿದ್ದೇವೆ. 14 ದಿನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ ಎಂದರು.
ನಿನ್ನೆ ರಾತ್ರಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಗುರುತು ಪತ್ತೆ ಆಗೋವರೆಗೂ ಆರೋಪಿಗಳ ಮಾಹಿತಿ ಹೇಳಲು ಆಗಲ್ಲ. ಕೊಲೆಗೆ ಕಾರಣ ಏನು ಅನ್ನೋದನ್ನ ಪೂರ್ಣ ತನಿಖೆ ಬಳಿಕ ಹೇಳುತ್ತೇವೆ. ಜಲೀಲ್ ಕೇಸ್ ನಲ್ಲಿ ಮಹಿಳೆಯರೂ ಸೇರಿ 10-12 ಜನರನ್ನ ವಶಕ್ಕೆ ಪಡೆದಿದ್ದೆವು. ಜಲೀಲ್ ಕುಟುಂಬಸ್ಥರು ಸೇರಿ ಕೆಲವರ ವಿಚಾರಣೆ ನಡೆದಿದೆ. ಆದರೆ ಸದ್ಯ ಒಟ್ಟು 3 ಜನರನ್ನ ಮಾತ್ರ ಬಂಧನ ಮಾಡಲಾಗಿದೆ ಎಂದು ಹೇಳಿದರು.
ಇನ್ನು ಮಂಗಳೂರಿನ ಸುರತ್ಕಲ್ ಸೇರಿದಂತೆ ಹಲವೆಡೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸುರತ್ಕಲ್, ಬಜ್ಪೆ, ಕಾವೂರು, ಪಣಂಬೂರು ವ್ಯಾಪ್ತಿಯಲ್ಲಿ ನಿನ್ನೆಯಿಂದ ಡಿ.27ರ ಬೆಳಗ್ಗೆ 6ರವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಮಂಗಳೂರು ಹೊರವಲಯದ ಸುರತ್ಕಲ್ ನ ಕಾಟಿಪಳ್ಳ ನಾಲ್ಕನೇ ಬ್ಲಾಕ್ ನಲ್ಲಿ ಜಲೀಲ್ (45) ಎಂಬುವರಿಗೆ ಶನಿವಾರ ಸಂಜೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದರು. ಇದರಿಂದ ತೀರ್ವ ಗಾಯಗೊಂಡಿದ್ದ ಜಲೀಲ್ ರನ್ನು ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಲೀಲ್ ಸಾವನ್ನಪ್ಪಿದ್ದಾರೆ.